‘ಅಭಿವ್ಯಕ್ತಿ: ಮಾನವೀಯ ಮೌಲ್ಯಗಳಿಂದ ತುಂಬಿರಲಿ’- ವೇಣುಗೋಪಾಲ ಶೆಟ್ಟಿ ಕೆ.
ವಿದ್ಯಾಗಿರಿ: ಸ್ವಾಭಿಮಾನ, ಸಾಮರಸ್ಯ ಸೇರಿದಂತೆ ಮಾನವೀಯ ಮೌಲ್ಯಗಳಿಂದ ಅಭಿವ್ಯಕ್ತಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಮೂಡುಬಿದಿರೆ ತಾಲ್ಲೂಕು ಘಟಕದ ಅಧ್ಯಕ್ಷ, ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ಡೀನ್ ವೇಣುಗೋಪಾಲ ಶೆಟ್ಟಿ ಕೆ. ಹೇಳಿದರು.
ಆಳ್ವಾಸ್ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ‘ಅಭಿವ್ಯಕ್ತಿ-2023’ ವೇದಿಕೆಯ ವಾರ್ಷಿಕ ಚಟುವಟಿಕೆಗಳನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೇವಲ ಕೌಶಲ ಇದ್ದರೆ ಸಾಲದು. ಅದರ ಅನುಷ್ಠಾನಕ್ಕೆ ಜ್ಞಾನವೂ ಮುಖ್ಯ ಎಂದ ಅವರು, ಕನ್ನಡ ಭಾಷೆಯು ದೇಸಿತನವನ್ನು ಹೊಂದಿದೆ. ಹಿರಿಯರು ಅಭಿವ್ಯಕ್ತಿಯ ಮೂಲಕವೇ ನಾಡನ್ನು ಕಟ್ಟಿದ್ದಾರೆ ಎಂದರು.
ವೈವಿಧ್ಯತೆಯಲ್ಲಿ ಏಕತೆಯು ದೇಶದ ವಿಶೇಷತೆ. ಅದನ್ನು ನಾವೆಲ್ಲ ಪಾಲಿಸಿ, ಸಂಸ್ಕೃತಿಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕು. ಜೊತೆಯಾಗಿ ಬದುಕುವ ಸಹನೀಯ ವಾತಾವರಣ ಬೆಳೆಸಬೇಕು ಎಂದು ಸಲಹೆ ನೀಡಿದರು.
ಸಮಾಜದಲ್ಲಿ ಯಶಸ್ವಿಯಾಗಿ ಬದುಕಲು ಎದುರಿಸುವ, ಮಾತನಾಡುವ, ವಿರೋಧಿಸುವ ಎಲ್ಲ ಪ್ರವೃತ್ತಿಗಳು ಬೇಕಾಗುತ್ತವೆ. ಆದರೆ, ಅವುಗಳೆಲ್ಲವನ್ನೂ ಸಹನೆಯಿಂದ ಅನುಸರಿಸಬೇಕು ಎಂದರು.
ಭಾಷೆಯು ನಮ್ಮನ್ನು ಬೆಸೆಯುತ್ತದೆ. ಬದುಕನ್ನು ಕಟ್ಟುತ್ತದೆ. ಉತ್ತಮ ಭಾಷಾ ಶೈಲಿಯನ್ನು ರೂಢಿಸಿಕೊಳ್ಳುವ ಮೂಲಕ ಉತ್ತಮ ಪತ್ರಕರ್ತನಾಗಲು ಸಾಧ್ಯ. ಓದು ಮತ್ತು ಸ್ಪಂದನೆ ಅವಶ್ಯ ಎಂದರು.
ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ ಮಾತನಾಡಿ, ‘ವಿದ್ಯಾರ್ಥಿಗಳ ಕೌಶಲಕ್ಕೆ ವಿಭಾಗದ ಅಭಿವ್ಯಕ್ತಿ ವೇದಿಕೆಯು ಅವಕಾಶ ಕಲ್ಪಿಸಿದೆ’ ಎಂದರು. ಅಭಿವ್ಯಕ್ತಿ-2023 ವೇದಿಕೆಯ ಪದಾಧಿಕಾರಿಗಳ ಆಯ್ಕೆಯು ನಡೆಯಿತು.
ಅಭಿವ್ಯಕ್ತಿ ವೇದಿಕೆಯ ಸಂಯೋಜಕಿ ದಿಶಾ ಗೌಡ, ಸಹ ಸಂಯೋಜಕ ವೈಶಾಖ್ ಮಿಜಾರು ಇದ್ದರು.
ಅಕ್ಷಯ್ ಕುಮಾರ್ ವಿದ್ಯಾರ್ಥಿ ವೇದಿಕೆಯ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಉಮರ್ ಫಾರುಕ್ ಅತಿಥಿಗಳನ್ನು ಪರಿಚಯಿಸಿದರು. ಪವಿತ್ರಾ ನಿರೂಪಿಸಿದರು. ಚಿದಾನಂದ ಸ್ವಾಗತಿಸಿ, ಶಿಲ್ಪಾ ಕುಲಾಲ್ ವಂದಿಸಿದರು.