ಮಂಗಳೂರು: ತುಳುನಾಡ ಮಾಣಿಕ್ಯ, ತುಳು ನಾಟಕ, ಸಿನಿಮಾ ಹಾಸ್ಯ ಕಲಾವಿದ ಅರವಿಂದ ಬೋಳಾರ್ ಅವರು ಬೈಕ್ ಸ್ಕಿಡ್ ನಿಂದ ಬಿದ್ದು ಗಾಯಗೊಂಡಿದ್ದಾರೆ. ಅವರು ಈಗ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಗರದ ಪಂಪ್ ವೆಲ್ ಬಳಿ ಅರವಿಂದ ಬೋಳಾರ್ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಎದುರಾಗಿ ಬಸ್ಸೊಂದು ಅತೀ ವೇಗವಾಗಿ ಚಲಿಸಿಕೊಂಡು ಬರುತ್ತಿತ್ತು. ಅದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಅವರು ದ್ವಿಚಕ್ರ ವಾಹನಕ್ಕೆ ಏಕಾಏಕಿ ಬ್ರೇಕ್ ಹಾಕಿದ್ದಾರೆ. ಈ ವೇಳೆ ದ್ವಿಚಕ್ರ ವಾಹನ ಸ್ಕಿಡ್ ಆಗಿ ಬಿದ್ದಿದೆ. ಪರಿಣಾಮ ಅರವಿಂದ ಬೋಳಾರ್ ಅವರ ಕೈ- ಕಾಲುಗಳಿಗೆ ಸಣ್ಣಪುಟ್ಟ ಗಾಯವಾಗಿದೆ. ಇದೀಗ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ಕಾಲಿನ ಶಸ್ತ್ರಚಿಕಿತ್ಸೆ ನಡೆಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ತಾನು ಸಡನ್ ಬ್ರೇಕ್ ಹಾಕದಿದ್ದಲ್ಲಿ ವೇಗವಾಗಿ ಬರುತ್ತಿದ್ದ ವಾಹನ ತನ್ನ ಮೇಲೆಯೇ ಹರಿದು ಪ್ರಾಣಕ್ಕೆ ಸಮಸ್ಯೆ ಆಗುತ್ತಿತ್ತು ಎಂದು ಅರವಿಂದ್ ಬೋಳಾರ್ ಆತಂಕ ವ್ಯಕ್ತಪಡಿಸಿದ್ದಾರೆ.