ಮಂಗಳೂರು: ನಾಪತ್ತೆಯಾದ ಅರಸೀಕೆರೆಯ ಯುವಕನ ಮೃತದೇಹ ತೊಕ್ಕೊಟ್ಟಿನ ಬಾವಿಯೊಂದರಲ್ಲಿ ಪತ್ತೆ

ಉಳ್ಳಾಲ: ಪಾಸ್ ಪೋರ್ಟ್ ನವೀಕರಣ ಮಾಡಲೆಂದು ಬೆಂಗಳೂರಿನಿಂದ ಆಗಮಿಸಿ ತೊಕ್ಕೊಟ್ಟಿನ ಲಾಡ್ಜ್ ನಲ್ಲಿ ತಂಗಿದ್ದ ಯುವಕನೋರ್ವನ ಮೃತದೇಹ ಲಾಡ್ಜ್ ಸಮೀಪದ ಮನೆಯೊಂದರ ಬಾವಿಯಲ್ಲಿ ರವಿವಾರ ಪತ್ತೆಯಾಗಿದೆ.

ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆ ನಿವಾಸಿ, ಬೆಂಗಳೂರಿನಲ್ಲಿ ವಾಸವಿದ್ದ ಮಹಂತೇಶ್ ಎ.ಎಸ್.(36) ಮೃತಪಟ್ಟ ದುರ್ದೈವಿ.

ಮಹಂತೇಶ್ ಕಳೆದ ಬುಧವಾರ ತೊಕ್ಕೊಟ್ಟಿನ ಕಾಪಿಕಾಡು ಎಂಬಲ್ಲಿನ ಲಾಡ್ಜ್‌ನಲ್ಲಿ ತಂಗಿದ್ದರು. ಶುಕ್ರವಾರ ಸಂಜೆ ಲಾಡ್ಜ್ ಸಿಬ್ಬಂದಿ ರೂಂ ತಪಾಸಣೆ ಮಾಡಿದ್ದ ವೇಳೆ ಮಹಂತೇಶ್ ನಾಪತ್ತೆಯಾಗಿರುವ ವಿಚಾರ ತಿಳಿದು ಬಂದಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಶನಿವಾರ ಮಹಂತೇಶ್ ಅವರ ಸಹೋದರಿ ಉಳ್ಳಾಲ ಠಾಣೆಗೆ ನಾಪತ್ತೆ ದೂರು ದಾಖಲಿಸಿದ್ದರು.

ಆದರೆ ರವಿವಾರ ಮಧ್ಯಾಹ್ನ ಅಂಬಿಕಾ ರೋಡ್ ಹೆದ್ದಾರಿಯ ಅಂಚಿನಲ್ಲಿರುವ‌ ಮನೆಯ ಬಾವಿಯೊಂದರಲ್ಲಿ ಮಹಂತೇಶ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಮತ್ತು ಉಳ್ಳಾಲ ಪೊಲೀಸರು ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.

ಮೃತದೇಹದ ಪ್ಯಾಂಟ್ ಜೇಬಲ್ಲಿ ಲಾಡ್ಜ್ ನ ರೂಂ ಕೀಲಿ ಕೈ ಮತ್ತು ಮಹಂತೇಶ ಅರಸೀಕೆರೆ ಎಂದು ಸ್ಟಿಕ್ಕರ್ ಹಚ್ಚಿರುವ ಪೆನ್ ಡ್ರೈವ್ ಲಭ್ಯವಾಗಿದೆ. ಪೊಲೀಸರು ಲಾಡ್ಜ್ ಸಿಬ್ಬಂದಿಯನ್ನು ಕರೆಸಿ ಮೃತದೇಹದ ಗುರುತು ಪತ್ತೆ ಹಚ್ಚಿದ್ದಾರೆ ಎಂದು ವರದಿಯಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu