ಸುರತ್ಕಲ್: ಖಾಸಗಿ ಮಾಹಿತಿ ಬಹಿರಂಗದ ಬೆದರಿಕೆ ; ರಾಜೇಶ್ ಪವಿತ್ರನ್ ಬಂಧನ


ಸುರತ್ಕಲ್: ಉದ್ಯಮಿಯೋರ್ವರ ಖಾಸಗಿ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸುವ ಬೆದರಿಕೆಯೊಡ್ಡಿರುವ ರಾಜ್ಯ ಹಿಂದೂ ಮಹಾ ಸಭಾದ ರಾಜೇಶ್‌ ಪವಿತ್ರನ್‌(42) ವಿರುದ್ಧ ದೂರು ದಾಖಲಿಸಿಕೊಂಡಿರುವ ಸುರತ್ಕಲ್‌ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಈತ ಚಿನ್ನ ಹಾಗೂ ಹಣಕ್ಕಾಗಿ ಖಾಸಗಿ ಮಾಹಿತಿ ಬಹಿರಂಗ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆಂದು ಆರೋಪಿಸಲಾಗಿದೆ. ಕಾವೂರು ನಿವಾಸಿ ಸುರೇಶ್‌ ಎಂಬವರು ಸುರತ್ಕಲ್‌ನಲ್ಲಿ ರಾಜೇಶ್‌ ಪವಿತ್ರನ್‌ ನೊಂದಿಗೆ ಪಾಲುದಾರಿಕೆಯಲ್ಲಿ ವ್ಯವಹಾರ ನಡೆಸಲು ಮುಂದಾಗಿದ್ದರು. ಆದರೆ ರಾಜೇಶ್‌ ಪವಿತ್ರನ್‌ನ ಅವ್ಯವಹಾರಗಳು ಗಮನಕ್ಕೆ ಬಂದುದರಿಂದ ಪಾಲುದಾರಿಕೆಯಿಂದ ಹೊರ ಬರಲು ಆತ ನಿರ್ಧರಿಸಿದ್ದರು.

ಇದರಿಂದ ಆಕ್ರೋಶಗೊಂಡ ಆರೋಪಿ ರಾಜೇಶ್ ಪವಿತ್ರನ್ , ಸುರೇಶ್‌ ಅವರ ಲ್ಯಾಪ್‌ ಟಾಪ್‌ ವಶಕ್ಕೆ ಪಡೆದು ಹೆಚ್ಚುವರಿ ಹಣ ನೀಡಬೇಕು. ಇಲ್ಲದಿದ್ದಲ್ಲಿ ಅದರಲ್ಲಿದ್ದ ಖಾಸಗೀ ಮಾಹಿತಿ ಬಹಿರಂಗ ಪಡಿಸುತ್ತೇನೆ. ಮಾತ್ರವಲ್ಲ ಕೈ, ಕಾಲು ಮುರಿಯುವುದಾಗಿ ಬೆದರಿಕೆಯೊಡ್ಡಿದ್ದಾನೆಂದು ಸುರೇಶ್‌ ಸುರತ್ಕಲ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಅದರಂತೆ ಪೊಲೀಸರು ಕ್ರಮ ಕೈಗೊಂಡು ರಾಜೇಶ್‌ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈತನಿಗೆ ನೆರವು ನೀಡಿದ ಆರೋಪದಲ್ಲಿ ಡಾ.ಸನಿಜ ಎಂಬಾಕೆಯ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.