ಮಂಗಳೂರು: ನಗರದ ಪುರಭವನದಲ್ಲಿ ನಡೆಯುತ್ತಿರುವ ಸಿಎಫ್ ಐ ಗರ್ಲ್ಸ್ ಕಾನ್ಫರೆನ್ಸ್ ಕಾರ್ಯಕ್ರಮಕ್ಕಿಂತ ಮೊದಲು ಪೊಲೀಸ್ ಅನುಮತಿಯಿಲ್ಲದೆ ಮೆರವಣಿಗೆ ನಡೆಸಲು ಯತ್ನಿಸಿರುವ ಸಿಎಫ್‌ಐ ಮಹಿಳಾ ಕಾರ್ಯಕರ್ತೆಯರನ್ನು ಮಂಗಳೂರು ಪೊಲೀಸರು ತಡೆದಿರುವ ಘಟನೆ ನಡೆದಿದೆ.
ನಗರದ ಮಿಲಾಗ್ರಿಸ್ ನಲ್ಲಿರುವ ಪಕ್ಕದ ಮಸೀದಿ ಬಳಿ ಸುಮಾರು 500ರಷ್ಟು ಸಿಎಫ್ಐ ಕಾರ್ಯಕರ್ತೆಯರು ಮೆರವಣಿಗೆ ಮೂಲಕ ಪುರಭವನಕ್ಕೆ ತೆರಳಲು ಜಮಾಯಿಸಿದ್ದರು. ಸ್ಥಳಕ್ಕೆ ಮಂಗಳೂರು ನಗರ ಕಮೀಷನರ್ ಎನ್ ಶಶಿಕುಮಾರ್, ಡಿಸಿಪಿ ಅಂಶು ಕುಮಾರ್ ಭೇಟಿ ನೀಡಿ ಮೆರವಣಿಗೆ ಮಾಡಲು ಅವಕಾಶ ನೀಡಲಿಲ್ಲ. ಮೆರವಣಿಗೆ ಮಾಡಿದ್ದಲ್ಲಿ ಕಾನೂನು ಕ್ರಮದ ಎಚ್ಚರಿಕೆಯನ್ನು ಪೊಲೀಸ್ ಕಮಿಷನರ್ ನೀಡಿದ್ದಾರೆ. ಕಮಿಷನರ್ ಎಚ್ಚರಿಕೆಯ ಹಿನ್ನೆಲೆಯಲ್ಲಿ ಸಿಎಫ್ಐ ಕಾರ್ಯಕರ್ತೆಯರು ಮೆರವಣಿಗೆ ಮಾಡದೆ ನಾಲ್ಕಾರು ಬಸ್ ಗಳ ಮೂಲಕ ಪುರಭವನದತ್ತ ತೆರಳಿದ್ದಾರೆ.
ಬಳಿಕ ಪುರಭವನದಲ್ಲಿ ನಡೆದ ಸಭೆಯಲ್ಲಿ ಮಂಗಳೂರಿನ ಹಿಜಾಬ್ ಹೋರಾಟಗಾರ್ತಿ ಗೌಸಿಯಾ ಮಾತನಾಡಿ, ಭಾರತ ದೇಶವು ಹೆಣ್ಣು ಮಕ್ಕಳಿಗೆ ಅಪಾಯಕಾರಿಯಾಗಿದ್ದು, ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ಮಹಿಳಾ ದೌರ್ಜನ್ಯ 70%ರಷ್ಟು ಏರಿಕೆಯಾಗಿದೆ. ದೇಶದಲ್ಲಿ ಒಂದು ಗಂಟೆಗೆ 48 ಹೆಣ್ಣು ಮಕ್ಕಳು ಕಾಣೆಯಾಗುತ್ತಿದ್ದಾರೆ. ಸರ್ಕಾರ ಹಿಜಾಬ್ ಧರಿಸದಂತೇ ಸುತ್ತೋಲೆ ಮಾಡುವ ಬದಲು ಗಾಂಜಾ, ಡ್ರಗ್ಸ್ ಸಾಗಾಟಕ್ಕೆ ಕಠಿಣ ಕ್ರಮ ಕೈಗೊಳ್ಳುವಂತೆ, ಅತ್ಯಾಚಾರಿಗಳಿಗೆ ಕಠಿಣ ಕ್ರಮ ಆಗುವಂತೆ ಸುತ್ತೋಲೆ ಮಾಡಿದರೆ ಚೆನ್ನಾಗಿರುತಿತ್ತು. ಸಮಾವೇಶದ ಮೊದಲು ಮೆರವಣಿಗೆ ಮಾಡದಂತೆ ಪೊಲೀಸರು ತಡೆದರು. ಸಿಎಫ್ಐ ಅಂದ್ರೆ ಸರ್ಕಾರಕ್ಕೆ ಭಯನಾ? ನಮ್ಮ ಧ್ವನಿ ಅಂದರೆ ನಿಮಗೆ ಅಷ್ಟೂ ಭಯ ಇದ್ಯಾ ಅಂತಾ ಗೌಸಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮಾವೇಶದಲ್ಲಿ ಮುಖ್ಯ ಭಾಷಣ ಮಾಡಿದ ಸಿಎಫ್ಐ ರಾಷ್ಟ್ರಾಧ್ಯಕ್ಷ ಎಂ.ಎಸ್.ಸಾಜೀದ್ ಮಾತನಾಡಿ, ಹಿಜಾಬ್ ಹೋರಾಟದಲ್ಲಿ ಯಾವ ಹೆಣ್ಣು ಮಕ್ಕಳೂ ಒಬ್ಬಂಟಿಯಲ್ಲ. ಪಿಎಫ್ಐ ಅವರೊಂದಿಗೆ ಇರುತ್ತದೆ. ನಮ್ಮದು ಆರ್ ಎಸ್ ಎಸ್ ಮತ್ತು ಹಿಂದುತ್ವದ ಫ್ಯಾಸಿಸಮ್ ವಿರುದ್ಧ ಈ ಹೋರಾಟವಾಗಿದೆ. ಒಂದು ಕೈಯ್ಯಲ್ಲಿ ಓದು ಮತ್ತೊಂದು ಕೈಯ್ಯಲ್ಲಿ ಹೋರಾಟ ನಡೆಯಲಿದೆ ಎಂದು ಹೇಳಿದರು.
ಉಡುಪಿ ಹಿಜಾಬ್ ಹೋರಾಟಗಾರ್ತಿ ಆಲಿಯಾ ಅಸಾದಿ ಮಾತನಾಡಿ, ನಮ್ಮ ಹಿಜಾಬ್ ನಿಂದ ಯಾರಿಗೂ ಸಮಸ್ಯೆ ಇಲ್ಲ. ವಿರೋಧಿಗಳಿಗೆ ಇರೋದು ನಾವು ಏಕದೇವರಾಧಕರು ಎನ್ನುವ ಮೇಲೆ. ಆದರೆ ನಾವು ಅದಕ್ಕೆಲ್ಲಾ ಒಪ್ಪೋದಿಲ್ಲ. ಮೊದಲು ಕಾಲೇಜು ನಾವು ಹಿಜಬ್ ಧರಿಸೋಕೆ ಒಪ್ಪಿಗೆ ನೀಡಿದೆ. ಹಿಜಾಬ್ ವಿಚಾರದಿಂದ ಕಾಲೇಜಿನ ಕೆಟ್ಟಮುಖವನ್ನೆಲ್ಲಾ ನೋಡಿದೆ. ಹಿಜಾಬ್ ನಿಂದ ಜೀವನದಲ್ಲಿ ಬಹಳಷ್ಟು ತಾಳ್ಮೆ ಕಲಿತುಕೊಂಡಿದ್ದೇವೆ. ಹಿಜಾಬ್ ವಿಚಾರವನ್ನು ಇಟ್ಟುಕೊಂಡು ನನ್ನ ಗೆಳತಿ ಅಫ್ರೀನ್ ಫಾತಿಮಾ ಎಂಬುವವರ ಮನೆ ಮೇಲೆ ಬುಲ್ಡೋಜರ್ ಹರಿಸಲಾಯಿತು. ಮಾನಸಿಕ ಚಿತ್ರಹಿಂಸೆ ನೀಡಿದರು. ಉಡುಪಿಯ ಏಳು ಮಂದಿಯ ವಿದ್ಯಾರ್ಥಿನಿಯರ ಹೆತ್ತವರು ಬೆಂಬಲ ನೀಡಿದರ ಪರಿಣಾಮ ಹೋರಾಟ ದಲ್ಲಿ ಮುಂದುವರಿಯಲು ಸಾಧ್ಯವಾಯಿತು. ಹಿಜಬ್ ವಿಚಾರವಾಗಿ ಸಿಎಫ್ ಐ ಆರಂಭದಿಂದಲೂ ಈವರೆಗೂ ಬೆಂಬಲ ನೀಡಿದೆ.
ಇನ್ನು ಸಮಾವೇಶದಲ್ಲಿ ಮಾತನಾಡಿದ ಸಿಎಫ್ಐ ರಾಜ್ಯಾಧ್ಯಕ್ಷ ಅಥಾವುಲ್ಲಾ ಪೂಂಜಾಲಕಟ್ಟೆ,ಸಿಎಫ್ಐ ಜಾಥಾಕ್ಕೆ,ವಿದ್ಯಾರ್ಥಿನಿಯರ ಜಾಥಾಕ್ಕೆ ಪೊಲೀಸ್ ಇಲಾಖೆ ಅಡ್ಡಿ ಮಾಡಿದೆ..ಪೊಲೀಸರ ಬ್ಯಾರಿಕೇಡ್ ನಮ್ಮನ್ನು ತಡೆದಿರಬಹುದು.ಆದರೆ ಮುಂದೊಂದು ದಿನಾ ಬ್ಯಾರಿಕೇಡ್ ಗಳು ಅರಬ್ಬೀ ಸಮುದ್ರಕ್ಕೆ ಬಿಸಾಡುವ ದಿನ ಹತ್ತಿರ ಬರಲಿದೆ.ಸಿಎಂ ಬಸವರಾಜ ಬೊಮ್ಮಾಯಿ ನಾಯಿ ಚಿತ್ರ ನೋಡಿ ಕಣ್ಣೀರು ಹಾಕಿದ್ದಾರೆ..ಆದರೆ ನೂರಾರು ವಿದ್ಯಾರ್ಥಿನಿಯರು ಕಾಲೇಜಿನ ಗೇಟ್ ಮುಂದೆ ರಸ್ತೆಯಲ್ಲಿ ಕೂತಾಗ ಸಿಎಂ ಮನಸ್ಸು ಕರಗಲಿಲ್ಲ ಎಂದು ಅಥಾವುಲ್ಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.