-->
ಕುಂದಾಪುರ: ಅತ್ಯಾಚಾರಗೈದು ಮಗುವಿನ ಜನ್ಮಕ್ಕೆ ಕಾರಣನಾದ ಆರೋಪಿಗೆ 10 ವರ್ಷ ಕಾರಾಗೃಹ ಶಿಕ್ಷೆ‌

ಕುಂದಾಪುರ: ಅತ್ಯಾಚಾರಗೈದು ಮಗುವಿನ ಜನ್ಮಕ್ಕೆ ಕಾರಣನಾದ ಆರೋಪಿಗೆ 10 ವರ್ಷ ಕಾರಾಗೃಹ ಶಿಕ್ಷೆ‌

ಉಡುಪಿ: ಮದುವೆಯಾಗುವುದಾಗಿ ನಂಬಿಸಿ ಪಿಯುಸಿ ವಿದ್ಯಾರ್ಥಿನಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ ಆಕೆಯನ್ನು ಗರ್ಭವತಿಯನ್ನಾಗಿಸಿದ ವಂಚನೆಗೈದಿರುವ ಪ್ರಕರಣದ ಆರೋಪಿಗೆ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ಕೆರಾಡಿ ನಿವಾಸಿ ಗಣೇಶ್ ಶೆಟ್ಟಿ (37) ಶಿಕ್ಷೆಗೊಳಗಾದ ಅಪರಾಧಿ.

ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ಉಳಿದುಕೊಂಡು ವ್ಯಾಸಂಗ ಮಾಡುತ್ತಿದ್ದಳು. ಆಕೆ ಅಲ್ಲಿಯೇ ಸಮೀಪದಲ್ಲಿದ್ದ ಗಣೇಶ್ ಶೆಟ್ಟಿಯ ಮನೆಗೆ ಟಿವಿ ನೋಡಲೆಂದು ಸ್ನೇಹಿತೆಯರೊಂದಿಗೆ ಬರುತ್ತಿದ್ದಳು‌. ಆಗ ಈತನ ಪರಿಚಯವಾಗಿತ್ತು.

ಪರಿಚಯ ಸಲುಗೆಗೆ ತಿರುಗಿತ್ತು. ಇದೇ ಸಲುಗೆಯನ್ನು ದುರ್ಬಳಕೆ ಮಾಡಿಕೊಂಡ ಗಣೇಶ್ ಶೆಟ್ಟಿ 2014ರಲ್ಲಿ ಆ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ‌. ಪರಿಣಾಮ ಆಕೆ ಗರ್ಭಿಣಿಯಾಗಿದ್ದಾಳೆ. ಬಳಿಕ ಆತ ಮದುವೆಯಾಗಲು ನಿರಾಕರಿಸಿದ್ದಲ್ಲದೆ ಫೋನ್ ಕರೆಗೂ ಸಿಕ್ಕದೆ ತಪ್ಪಿಸಿಕೊಂಡಿದ್ದಾನೆ. ಬಳಿಕ ಸಂತ್ರಸ್ತೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ದಾಖಲಾಗಿತ್ತು. ಅದರಂತೆ ಆರೋಪಿಯನ್ನು ಬಂಧಿಸಿರುವ ಪೊಲೀಸರು ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಡಿಎನ್ಎ ವರದಿಯಲ್ಲೂ ಗಣೇಶ್ ಶೆಟ್ಟಿಯೇ ತಂದೆಯೆಂದು ದೃಢಗೊಂಡಿತ್ತು. ಇದೀಗ ಆರೋಪಿಯ ಮೇಲಿನ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ್ ಶೇಖ್ ಅತ್ಯಾಚಾರ ಪ್ರಕರಣಕ್ಕೆ 10 ವರ್ಷ ಕಾರಾಗೃಹ ಶಿಕ್ಷೆ, 10 ಸಾವಿರ ರೂ. ದಂಡ, ನಂಬಿಸಿ ಮೋಸ ಮಾಡಿರುವುದಕ್ಕೆ 1 ವರ್ಷ ಕಾರಾಗೃಹ ಶಿಕ್ಷೆ, 5 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ಸಂತ್ರಸ್ತೆಗೆ ಕಾನೂನು ಪ್ರಾಧಿಕಾರದ ಪರಿಹಾರ ಒದಗಿಸಲು ಆದೇಶ ನೀಡಿದೆ‌. ಪ್ರಾಸಿಕ್ಯೂಷನ್ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು ವಾದಿಸಿದ್ದಾರೆ.

Ads on article

Advertise in articles 1

advertising articles 2

Advertise under the article