ಮನೆಮುಂದೆ ಕುಳಿತಿದ್ದ ವಿಕಲಚೇತನೆ ಯುವತಿಯನ್ನು ಅತ್ಯಾಚಾರವೆಸಗಿದ ದುಷ್ಕರ್ಮಿಗಳು

ಅಕ್ಕಿಆಲೂರ(ಹಾವೇರಿ):‌ ಮನೆಯಲ್ಲಿ  ಒಬ್ಬಳೇ ಇದ್ದ ವೇಳೆ ವಿಕಲಚೇತನೆ ಯುವತಿಯ ಮೇಲೆ ಇಬ್ಬರು ದುಷ್ಕರ್ಮಿಗಳು ಅತ್ಯಾಚಾರವೆಸಗಿ ಪರಾರಿಯಾಗಿರುವ ಘಟನೆ ಹಾನಗಲ್ಲ ತಾಲೂಕಿನ ತಿಳವಳ್ಳಿ ಗ್ರಾಮದಲ್ಲಿ ನಡೆದಿದೆ. ದುಷ್ಕರ್ಮಿಗಳಲ್ಲಿ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮಲ್ಲಾಪುರ ಗ್ರಾಮದ ಪರಶುರಾಮ ಮಂಜಪ್ಪ ಮಡಿವಾಳರ ಬಂಧಿತ ಆರೋಪಿ. ಆನವಟ್ಟಿಯ ಯಶವಂತ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಯುವತಿಯ ತಂದೆ-ತಾಯಿ ಕೂಲಿ ಕೆಲಸಕ್ಕೆ ಹೋಗಿದ್ದರು. ಸಹೋದರ ಮತ್ತು ಸಹೋದರಿಯರು ಶಾಲಾ-ಕಾಲೇಜಿಗೆ ತೆರಳಿದ್ದರು. ಆ ವೇಳೆ ಈ ವಿಕಲಚೇತನ ಯುವತಿ ಮನೆಯ ಮುಂದೆ ಕುಳಿತಿದ್ದಳು. ಅಲ್ಲಿಗೆ ಬಂದ ಈ ದುಷ್ಕರ್ಮಿಗಳು ಯುವತಿಯನ್ನು ಮನೆಯೊಳಗೆ ಎಳೆದೊಯ್ದು ಬಾಯಿಗೆ ಬಟ್ಟೆ ಕಟ್ಟಿ, ಅತ್ಯಾಚಾರ ಎಸಗಿದ್ದಾರೆ. ಬಳಿಕ ಯುವತಿಯು ಹರಸಾಹಸಪಟ್ಟು ಬಾಯಿಗೆ ಕಟ್ಟಿದ್ದ ಬಟ್ಟೆ ಕಿತ್ತುಹಾಕಿ ಚೀರಾಡಿದ್ದಾಳೆ. ಅಕ್ಕಪಕ್ಕದ ನಿವಾಸಿಗಳು ಆಗಮಿಸುತ್ತಿದ್ದಂತೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ತೀವ್ರ ಅಸ್ವಸ್ಥಳಾದ ಯುವತಿಯನ್ನು ತಿಳವಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಕುರಿತು ಆಡೂರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಮುಖ ಆರೋಪಿ ಪರಶುರಾಮ ಮಡಿವಾಳರನನ್ನು ಪೊಲೀಸರು 
ಪತ್ತೆಹಚ್ಚಿ ಬಂಧಿಸಿದ್ದಾರೆ. ಯಶವಂತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಆಡೂರ ಪಿಎಸ್​ಐ ಗಡ್ಡೆಪ್ಪ ಗುಂಜಟಗಿ ತಿಳಿಸಿದ್ದಾರೆ.