ಮಂಗಳೂರು: ಅಬ್ಬರದ ಮಳೆಗೆ ತಗ್ಗು ಪ್ರದೇಶಗಳು ಜಲಾವೃತ; ಪರದಾಡುತ್ತಿರುವ ಜನತೆ
Thursday, June 30, 2022
ಮಂಗಳೂರು: ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ಮಂಗಳೂರು ನಗರದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡು ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡು ಜನರು ಪರದಾಡುವಂತಾಗಿದೆ.
ನಗರದ ಕೊಟ್ಟಾರ - ಚೌಕಿ ಪ್ರದೇಶದ ರಸ್ತೆಯಲ್ಲಿ ಸಂಪೂರ್ಣ ನೀರು ತುಂಬಿಕೊಂಡಿದ್ದು, ವಾಹನಗಳು ಸರಾಗವಾಗಿ ಸಂಚರಿಸಲು ಸಾಧ್ಯವಾಗದೆ ಜನತೆ ತೊಂದರೆ ಅನುಭವಿಸುವಂತಾಯಿತು. ಎಲ್ಲೆಡೆ ನೀರುಮಯವಾಗಿದ್ದು ಅಂಗಡಿಗಳೊಳಗೆ ನೀರು ನುಗ್ಗಿದೆ. ಅಲ್ಲದೆ ಯಾವುದೇ ಅಂಗಡಿಗಳನ್ನು ತೆರೆಯದಂತಹ ಸ್ಥಿತಿ ನಿರ್ಮಾಣವಾಗಿದೆ. ಅದೇ ರೀತಿ ಪಡೀಲು ಪ್ರದೇಶವೂ ಸಂಪೂರ್ಣ ಜಲಾವೃತವಾಗಿದ್ದು, ವಾಹನ ಸವಾರರು ನೀರಿನ ಮಧ್ಯೆಯೇ ವಾಹನ ಸವಾರಿ ಮಾಡುವ ದೃಶ್ಯ ಕಂಡು ಬಂದಿದೆ. ಅದರಲ್ಲೂ ಬೈಕ್ ಸವಾರರು ಪಾಡು ಪಡುವಂತಹ ದೃಶ್ಯ ಕಂಡು ಬಂದಿತು.
ನಂತೂರುವಿನಿಂದ ಪಡೀಲು ಮಧ್ಯೆ ಮರೋಳಿಯ ಹೆದ್ದಾರಿಯಲ್ಲಿಯೂ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ರಸ್ತೆ ಪೂರ್ತಿ ನೀರು ನಿಂತು ವಾಹನ ಸವಾರರು ನೀರಿನ ಮಧ್ಯೆಯೇ ವಾಹನ ಸವಾರಿ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ. ಅಲ್ಲದೆ ನೀರುಮಾರ್ಗದ ಬದಿಬಡಿ ಕ್ಷೇತ್ರವೂ ಸಂಪೂರ್ಣ ಜಲಾವೃತಗೊಂಡಿರುವ ವೀಡಿಯೋ ವೈರಲ್ ಆಗುತ್ತಿದೆ.
ಮಳೆಯ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಂಗಳೂರು ವ್ಯಾಪ್ತಿಯಲ್ಲಿ ಈಗಾಗಲೆ ಶಾಲೆಗಳಿಗೆ ಬಂದಿರುವ ಮಕ್ಕಳನ್ನು ಎಲ್ಲಾ ಮುಂಜಾಗೃತೆ ವಹಿಸಿ ಕಾರ್ಯ ನಿರ್ವಹಿಸಿ ಶಾಲೆಗೆ ಬರಲು ಅನಾನುಕುಲವಾದ ಪ್ರದೇಶದ ಮಕ್ಕಳಿಗೆ ಈ ದಿನ ರಜೆ ಘೋಷಿಸಲಾಗಿದೆ. ಅಲ್ಲದೆ ಪಿಯು ಹಾಗೂ ಪದವಿ ವಿದ್ಯಾರ್ಥಿಗಳಿಗೂ ರಜೆ ಘೋಷಣೆ ಮಾಡಲಾಗಿದೆ. ಇಂದು ದ.ಕ.ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆಯಾಗಿದೆ.