-->

ಫೇಸ್​ಬುಕ್ ಜಾಹೀರಾತನ್ನು ನಂಬಿ ಇಲ್ಲಿಗೆ ಕೆಲಸಕ್ಕೆ ಬಂದವರಿಗೆ ಕಾದಿತ್ತು ಬಿಗ್ ಶಾಕ್!

ಫೇಸ್​ಬುಕ್ ಜಾಹೀರಾತನ್ನು ನಂಬಿ ಇಲ್ಲಿಗೆ ಕೆಲಸಕ್ಕೆ ಬಂದವರಿಗೆ ಕಾದಿತ್ತು ಬಿಗ್ ಶಾಕ್!

ತುಮಕೂರು: ಫೇಸ್​ಬುಕ್ ಜಾಹೀರಾತನ್ನು ನಂಬಿ ಇಲ್ಲಿಗೆ ಕೆಲಸ ಸಿಗುತ್ತದೆ ಎಂದು ಬಂದಿರೋ, ಇನ್ನಿಲ್ಲದ ಪಾಡು ಪಡಬೇಕಾಗುತ್ತದೆ. ತುಮಕೂರಿನಲ್ಲಿ ತಲೆ ಎತ್ತಿರುವ ಈ ನಕಲಿ ಚೈನ್ ಲಿಂಕ್ ಆನ್ಲೈನ್ ಕಂಪನಿಯಿಂದ ಬಹಳಷ್ಟು ಮಂದಿ ತೊಂದರೆಗೆ ಸಿಲುಕಿದ್ದಾರೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಮುಗಿಸಿರುವವರೇ ಇವರ ಟಾರ್ಗೆಟ್. ಹದಿಹರೆಯದ ಯುವಕ-ಯುವತಿಯರಿಗೆ ಕೆಲಸದ ಆಮಿಷವೊಡ್ಡಿ ಇವರು ಗಾಳ ಹಾಕ್ತಾರೆ. 

2-3 ದಿನಗಳ ಟ್ರೈನಿಂಗ್ ನೆಪದಲ್ಲಿ ಕಳ್ಳಾಟವಾಡ್ತಾ ಮೋಸದ ಚೈನ್ ಲಿಂಕ್​ನ ಬಲೆಗೆ ಸಿಕ್ಕಿಸಿಬಿಡ್ತಾರೆ. ಯುವತಿಯರಿಗೆ ಇನ್ನಿಲ್ಲದ ಆಸೆ ತೋರಿಸಿ ಲೈಂಗಿಕವಾಗಿ ಬಳಸಿಕೊಂಡು ಖಾಸಗಿ ವಿಡಿಯೋ ಸೆರೆ ಹಿಡಿದು ವರಸೆ ಬದಲಿಸ್ತಾರೆ. ಇದೀಗ ಈ ಜಾಲದ ವಂಚನೆ ಕೃತ್ಯ ಬಯಲಾಗಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ‌.

‘ಸಿಎಲ್​ವೈ’ ಎಂಬ ಕಂಪೆನಿ ಹೆಸರಿನಲ್ಲಿ ಜಾಹೀರಾತು ಹಾಕುವ ಈ ವಂಚಕರು ಅಮಾಯಾಕರೊಂದಿಗೆ ಚೆಲ್ಲಾಟ ಆಡಿದ್ದಾರೆ. ತುಮಕೂರಿನಲ್ಲಿ ಆಫೀಸ್ ಅನ್ನು ತೆರೆಯದೆ ಅಪಾರ್ಟ್​ಮೆಂಟ್​ನಲ್ಲಿ 3-4 ಫ್ಲ್ಯಾಟ್​ಗಳನ್ನು ಬಾಡಿಗೆ ಪಡೆದು ಅಲ್ಲಿಯೇ ಈ ಕೃತ್ಯವನ್ನು ಎಸಗಿದ್ದಾರೆ. ತುಮಕೂರಿನ ಊರುಕೆರೆ ಬಳಿಯ ಸ್ವರ್ಣಗೃಹ ಅಪಾರ್ಟ್​ಮೆಂಟ್​ನಲ್ಲಿ ವಂಚಕರು ಮನೆಗಳನ್ನು ಬಾಡಿಗೆ ಪಡೆದಿದ್ದಾರೆ. ಫೇಸ್​ಬುಕ್​ನಲ್ಲಿ ‘ಸಿಎಲ್​ವೈ’ ಕಂಪೆನಿ ಹೆಸರಿನಲ್ಲಿ ವಂಚಕರು ಹಾಕಿದ್ದ ನಕಲಿ ಜಾಹೀರಾತನ್ನು ನೋಡಿ ಕೆಲಸ ಪಡೆಯುವ ಆಸೆಯಿಂದ ಶಿವಮೊಗ್ಗ, ಚಾಮರಾಜನಗರ, ಕೊಪ್ಪಳ, ಹುಬ್ಬಳ್ಳಿ, ದಾವಣಗೆರೆ ಸೇರಿ ಹಲವು ಜಿಲ್ಲೆಗಳ 30ಕ್ಕೂ ಹೆಚ್ಚು ಯುವಕ-ಯುವತಿಯರು ಸಂಪರ್ಕಿಸಿದ್ದಾರೆ. 

ಆರಂಭದಲ್ಲಿ ನೋಂದಣಿಗೆಂದು 2,500 ರೂ. ಪಡೆದ ವಂಚಕರು, ಉತ್ತಮ ಕೆಲಸ, ಕೈ ತುಂಬಾ ‌ಸಂಬಳ, ಕಾರು, ಬಂಗಲೆಯ ಆಸೆ ತೋರಿಸಿದ್ದಾರೆ. ನಿಮಗೆ ಒಳ್ಳೆಯ ಕೆಲಸ ಕೊಡಿಸಬೇಕೆಂದರೆ ನಮಗೆ ತಲಾ 40ರಿಂದ 50 ಸಾವಿರ ರೂ. ಕೊಡಬೇಕೆಂದು ಹೇಳಿದ್ದಾರೆ. ಎರಡು ಮೂರು ದಿನಗಳ ಟ್ರೈನಿಂಗ್ ನೆಪದಲ್ಲಿ ಕಳ್ಳಾಟವಾಡಿದ್ದಾರೆ. ಬಳಿಕ ಇದೊಂಥರಾ ಚೈನ್ ಲಿಂಕ್. ನೀವು ಎಷ್ಟು ಮಂದಿಯನ್ನು ನಮ್ಮ ಕಂಪನಿಗೆ ಸೇರಿಸುತ್ತಿರೋ ಅಷ್ಟೇ ಲಾಭ ಇದೆ. ನಿಮಗೆ ಕಮಿಷನ್​ ಸಿಗುತ್ತೆ’ ಎಂದು ಬ್ರೈನ್​ ವಾಷ್​ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕೆಲಸ ಕೇಳಿಕೊಂಡು ಬಂದಿದ್ದ ಕೆಲ ಯುವತಿಯರಿಗೆ ಇಲ್ಲಸಲ್ಲದ ಆಸೆ ಹುಟ್ಟಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. 

ತಾವು ಮೋಸ ಹೋಗಿರುವುದು ಗೊತ್ತಾಗಿ ‘ನಮಗೆ ಕೆಲಸ ಬೇಡ, ನಮ್ಮ ಹಣ ಕೊಡಿ’ ಎಂದವರ ಮೇಲೆ ಪುಡಿರೌಡಿಗಳನ್ನು ಕರೆಸಿ ಹಲ್ಲೆ ಮಾಡಿಸಿದ್ದಾರೆ. ‘ಹಣ ವಾಪಸ್ ಕೇಳಿದ್ರೆ ಹಾಗೂ ಇದರ ವಿರುದ್ಧ ಪೊಲೀಸರಿಗೆ ದೂರು ಕೊಟ್ಟರೆ ಕೊಲೆ ಮಾಡುತ್ತೀವಿ’ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಅತ್ತ ಯುವತಿಯರಿಗೆ ಖಾಸಗಿ ವೀಡಿಯೋ ಹಾಗೂ ಫೋಟೋಗಳನ್ನು ತೋರಿಸಿ ಬ್ಲ್ಯಾಕ್​ಮೇಲ್ ಮಾಡಿದ್ದಾರೆ. ವಂಚಕರ ಜಾಲಕ್ಕೆ ಸಿಲುಕಿ ನರಳಿದ ಹಲವರಲ್ಲಿ ಕೆಲವರು ಧೈರ್ಯ ಮಾಡಿ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಮಂಗಳವಾರ ಸಂಜೆ ಪೊಲೀಸರು ಅಪಾರ್ಟ್​ಮೆಂಟ್​ ಮೇಲೆ ದಾಳಿ ಮಾಡಿದ್ದು, ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.

Ads on article

Advertise in articles 1

advertising articles 2

Advertise under the article