430 ಕಿ.ಮೀ.ದೂರದಿಂದ ಬಂದು ಸಹೋದರಿಯ ಚಿತೆಗೆ ಹಾರಿ ಪ್ರಾಣಬಿಟ್ಟ ತಮ್ಮ!

ಮಧ್ಯಪ್ರದೇಶ: ಅನುಮಾನಾಸ್ಪದವಾಗಿ ಮೃತಪಟ್ಟ ಸಹೋದರಿಯ ಅಂತ್ಯಸಂಸ್ಕಾರದ ವೇಳೆ ತಮ್ಮ ಅಕ್ಕನ ಚಿತೆಗೆ ಹಾರಿ ಪ್ರಾಣಬಿಟ್ಟ ದುರ್ಘಟನೆಯೊಂದು ಮಧ್ಯಪ್ರದೇಶದ ಸಾಗರದಲ್ಲಿ ನಡೆದಿದೆ. 

ಧಾರ್‌ ನಿವಾಸಿ ಉದಯ್ ಸಿಂಗ್ ಎಂಬರ ಪುತ್ರ ಕರಣ್ ಡಾಂಗಿ(18) ಮೃತ ದುರ್ದೈವಿ. 

ಬಹೇರಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಮಜ್ಗವಾನ್ ಗ್ರಾಮದಲ್ಲಿ ಕರಣ್​ ಚಿಕ್ಕಪನ ಪುತ್ರಿ ಜ್ಯೋತಿ(21)‌ಎಂಬಾಕೆ ಜೂ.9ರಂದು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಎಷ್ಟೇ ಹುಡಕಾಟ ಮಾಡಿದರೂ ಆಕೆ ಪತ್ತೆಯಾಗಿರಲಿಲ್ಲ. ಆದರೆ ಮರುದಿನ ಆಕೆಯ ಮೃತದೇಹ ತೋಟದ ಬಾವಿಯಲ್ಲಿ ಪತ್ತೆಯಾಗಿತ್ತು.

 ಈ ಹಿನ್ನೆಲೆಯಲ್ಲಿ ಆಕೆಯ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಲಾಗಿತ್ತು. ಆದರೆ ಸಹೋದರಿಯ ಸಾವಿನ ಸುದ್ದಿ ತಿಳಿದು ಆಘಾತಗೊಂಡಿದ್ದ ಕರಣ್​, 430 ಕಿ.ಮೀ. ದೂರದಿಂದ ಸ್ಮಶಾನಕ್ಕೆ ಆಗಮಿಸಿದ್ದ. ಕುಟುಂಬಸ್ಥರು ಜ್ಯೋತಿಯ ಚಿತೆಗೆ ಬೆಂಕಿ ಇಟ್ಟು ಮನೆಯತ್ತ ಹೊರಟಿದ್ದರು. ಈ ವೇಳೆ ಉರಿಯುತ್ತಿದ್ದ ಚಿತೆಗೆ ನಮಸ್ಕರಿಸುವುದಾಗಿ ಎಂದು ಹೇಳಿ ಹೋದ ಕರಣ್​, ಏಕಾಏಕಿ ಚಿತೆಗೆ ಹಾರಿದ್ದಾನೆ. ಇದನ್ನು ನೋಡಿದ್ದ ಗ್ರಾಮಸ್ಥರು ತಕ್ಷಣ ಆತನನ್ನು ರಕ್ಷಿಸಲು ಸ್ಥಳಕ್ಕೆ ದೌಡಾಯಿಸಿದ್ದರು. ಆದರೆ ಅಷ್ಟರಲ್ಲಿ ಕರಣ್​ ಸುಟ್ಟು ಕರಕಲಾಗಿದ್ದ. ಈ ಬಗ್ಗೆ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಕರಣ್ ಮತ್ತು ಜ್ಯೋತಿ ಬಹಳ ಆತ್ಮೀಯವಾಗಿದ್ದರು. ದಿನನಿತ್ಯವಝ ಫೋನಿನಲ್ಲಿ ಗಂಟೆಗಟ್ಟಲೇ ಮಾತನಾಡುತ್ತಿದ್ದರು. ರಕ್ಷಾಬಂಧನ ಹಬ್ಬಕ್ಕೆ ದೂರದೂರಿನಿಂದ ಕರಣ್​, ತಪ್ಪದೇ ಜ್ಯೋತಿ ಮನೆಗೆ ಬಂದು ಆಕೆಯಿಂದ ರಾಖಿ ಕಟ್ಟುತ್ತಿದ್ದ. ಇದೀಗ ಆಕೆಯ ಸಾವಿನಿಂದ ಕಂಗೆಟ್ಟ ಕರಣ್​ ಚಿತೆಗೆ ಹಾರಿ ಪ್ರಾಣ ಬಿಟ್ಟಿದ್ದಾನೆ.