
ಮದುವೆಗೆ ಕನ್ಯೆ ಹುಡುಕಾಡಿ ಬೇಸತ್ತ ಯುವಕ 'ಬಾಲ್ಯ ವಿವಾಹವೇಕೆ ಮಾಡಲಿಲ್ಲ?' ಎಂದು ಅಜ್ಜಿಯನ್ನೇ ಹೊಡೆದು ಕೊಂದ
Tuesday, May 17, 2022
ಸೊಲ್ಲಾಪುರ(ಮಹಾರಾಷ್ಟ್ರ): ವಿವಾಹವಾಗಲು ತನಗೆ ಹುಡುಗಿ ಸಿಗುತ್ತಿಲ್ಲವೆಂದು ಮನನೊಂದಿದ್ದ ಯುವಕನೋರ್ವನು ಬಾಲ್ಯ ವಿವಾಹವೇಕೆ ಮಾಡಲಿಲ್ಲವೆಂದು ಕೋಪಗೊಂಡು ತನ್ನ ಅಜ್ಜಿಯನ್ನೇ ಹೊಡೆದು ಕೊಂದ ಹಾಕಿರುವ ಘಟನೆ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆದಿದೆ.
ಮಲಂಬಿ ಹಸನ್ ಸಾಹಬ್ ನದಾಫ್ (70) ಕೊಲೆಯಾದ ದುರ್ದೈವಿ ಅಜ್ಜಿ. ಸಲೀಂ ಜಹಾಂಗೀರ್ ನದಾಫ್ ಕೊಲೆ ಕೃತ್ಯ ನಡೆಸಿರುವ ಆರೋಪಿ. ಕಲಬುರಗಿಯಲ್ಲಿ ವೃತ್ತಿ ನಿರ್ವಹಿಸುತ್ತಿದ್ದ ಸಲೀಂನನ್ನು ಸೊಲ್ಲಾಪುರದಲ್ಲಿರುವ ಅಜ್ಜಿ ಮಲಂಬಿ ಇತ್ತೀಚೆಗಷ್ಟೇ ಕರೆಸಿಕೊಂಡಿದ್ದರು. ಈ ವೇಳೆ ನದಾಫ್ ವಿವಾಹದ ವಿಚಾರವಾಗಿ ಚರ್ಚೆ ನಡೆದಿತ್ತು. ಆದರೆ ಮದುವೆಯಾಗಲು ಕನ್ಯೆ ದೊರಕದೆ ಬೇಸತ್ತಿದ್ದ ಸಲೀಂ ಜಹಾಂಗೀರ್ ಅಜ್ಜಿಯ ತಲೆಗೆ ದೊಣ್ಣೆಯಿಂದ ಹೊಡೆದಿದ್ದಾನೆ. ಆಕೆ ಸ್ಥಳದಲ್ಲೇ ಮೂರ್ಛೆ ಹೋಗಿದ್ದಾರೆ. ತಕ್ಷಣ ಅಜ್ಜಿಯನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಸಲೀಂ ಜಹಾಂಗೀರ್ ನದಾಫ್ ಮದುವೆಯಾಗಲು ಕೆಲ ದಿನಗಳಿಂದ ಹುಡುಗಿ ಹುಡುಕಾಡುತ್ತಿದ್ದನು. ಆದರೆ, ಕನ್ಯೆ ನಿಶ್ಚಯವಾಗದೆ ಆತ ಬೇಸತ್ತಿದ್ದನು. ಇದರಿಂದ ಸಲೀಂನ ಸಿಟ್ಟು ಕುಟುಂಬದವರ ಮೇಲೆ ಹೊರಳಿತ್ತು.
ಅಜ್ಜಿಯ ಆಹ್ವಾನದ ಮೇರೆಗೆ ಸೊಲ್ಲಾಪುರಕ್ಕೆ ಹೋದ ಆತ ತನಗೆ ಯಾಕೆ ಬಾಲ್ಯ ವಿವಾಹ ಮಾಡಲಿಲ್ಲ ಎಂದು ವರಾತೆ ತೆಗೆದಿದ್ದಾನೆ. ಇದರಿಂದ ಅಜ್ಜಿ ಮತ್ತು ಮೊಮ್ಮಗನ ಮಧ್ಯೆ ವಿವಾಹದ ವಿಚಾರಕ್ಕೆ ಜೋರು ಗಲಾಟೆ ನಡೆದಿದೆ. ಈ ವೇಳೆ ಅಲ್ಲಿಯೇ ಇದ್ದ ದೊಣ್ಣೆಯಿಂದ ಅಜ್ಜಿ ಮಲಂಬಿ ತಲೆಗೆ ಬಾರಿಸಿದ್ದಾನೆ. ಪರಿಣಾಮ ಅಜ್ಜಿ ರಕ್ತಸ್ರಾವವಾಗಿ ಅಲ್ಲಿಯೇ ಕುಸಿದು ಬಿದ್ದಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಅಜ್ಜಿ ಮಲಂಬಿ ಬದುಕುಳಿಯಲಿಲ್ಲ.
ಇದೀಗ ಅಜ್ಜಿಯನ್ನು ಕೊಲೆಗೈದಿರುವ ಆರೋಪದ ಮೇಲೆ ಸಲೀಂ ಜಹಾಂಗೀರ್ ವಿರುದ್ಧ ಫಿರೋಜ್ ಶುಕೂರ್ ನದಾಫ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಲೀಂನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.