ಶವರ್ಮಾ, ಜ್ಯೂಸ್ ಸೇವಿಸಿ ಬಾಲಕಿ ಸಾವು, 18 ವಿದ್ಯಾರ್ಥಿಗಳು ಅಸ್ವಸ್ಥ: ವಿಷಾಹಾರ ಸೇವನೆ ಶಂಕೆ

ಕಾಂಞಂಗಾಡ್(ಕೇರಳ): ಇಲ್ಲಿನ ಹೊಟೇಲೊಂದರಲ್ಲಿ ಶವರ್ಮಾ, ಜ್ಯೂಸ್‌ ಹಾಗೂ ಇನ್ನಿತರ ಆಹಾರ ಸೇವನೆಯಿಂದ 16 ವರ್ಷದ ಬಾಲಕಿ ಮೃತಪಟ್ಟು 18 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥರಾಗಿರುವ ಘಟನೆ ನಡೆದಿದೆ. ಈ ಘಟನೆಗೆ ವಿಷಾಹಾರ ಸೇವನೆಯೇ ಕಾರಣವಿರಬಹುದು ಎಂದು ಶಂಕಿಸಲಾಗಿದೆ.

ಕಾಂಞಂಗಾಡ್ ಜಿಲ್ಲೆಯ ಕರಿವಲ್ಲೂರಿನ ನಿವಾಸಿ  ಬಾಲಕಿ ವಿಷಾಹಾರ ಸೇವನೆ ಮಾಡಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದರು. ಈ ಹಿನ್ನೆಲೆಯಲ್ಲಿ ಹೊಟೇಲ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು ಸದ್ಯ ಹೊಟೇಲ್ ಅನ್ನು ಬಂದ್ ಮಾಡಿ, ತನಿಖೆ ಮುಂದುವರೆಸಿದ್ದಾರೆ. 

ಆಸ್ಪತ್ರೆಗೆ ದಾಖಲಾಗಿರುವ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾಸ್ಪತ್ರೆಗೆ ಕೇರಳ ಸಚಿವ ಎಂ.ವಿ.ಗೋವಿಂದನ್ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ್ದಾರೆ. ರಾಜ್ಯದ ಹೊಟೇಲ್‌ಗಳಲ್ಲಿ ಗುಣಮಟ್ಟದ ಆಹಾರ ಪೂರೈಕೆಯಾಗುವಂತೆ ಸರ್ಕಾರ ನೋಡಿಕೊಳ್ಳುತ್ತದೆ. ಈ ಕುರಿತು ರಾಜ್ಯಾದ್ಯಂತ ತನಿಖೆ ಕೈಗೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu