-->

ಕೊನೆಗೂ ಆನ್ ಲೈನ್ ನಲ್ಲಿ 1.45 ಕೋಟಿ ರೂ. ವ್ಯವಹಾರ ನಡೆಸಿದ್ದ ಯುವತಿಯ ಆತ್ಮಹತ್ಯೆಯ ಹಿಂದಿನ ನಿಗೂಢ ಕಾರಣ ಬಯಲು!

ಕೊನೆಗೂ ಆನ್ ಲೈನ್ ನಲ್ಲಿ 1.45 ಕೋಟಿ ರೂ. ವ್ಯವಹಾರ ನಡೆಸಿದ್ದ ಯುವತಿಯ ಆತ್ಮಹತ್ಯೆಯ ಹಿಂದಿನ ನಿಗೂಢ ಕಾರಣ ಬಯಲು!

ಕೊಯಿಕ್ಕೋಡ್​: ಕೆಲ ತಿಂಗಳ ಹಿಂದೆ ಕೇರಳದಲ್ಲಿ ನಿಗೂಢವಾಗಿ ಮೃತಪಟ್ಟಿದ್ದ ಬಿಜಿಶಾ ಎಂಬ ಯುವತಿಯ ಸಾವಿನ ಪ್ರಕರಣದ ತನಿಖೆ ನಡೆಸುತ್ತಿದ್ದ ಕೇರಳದ ಸಿಸಿಬಿ ತಂಡ ಕೊನೆಗೂ ಸಾವಿನ ಹಿಂದಿರುವ ಕಾರಣವನ್ನು ಪತ್ತೆಮಾಡಿದೆ. ಬಿಜಿಶಾ ಸಾವು ಆತ್ಮಹತ್ಯೆಯೇ ಆಗಿದ್ದು, ಆನ್​ಲೈನ್​ ರಮ್ಮಿ ಗೇಮ್​ ಆಡಿ ದೊಡ್ಡ ಮೊತ್ತದ ಹಣ ಕಳೆದುಕೊಂಡಿರುವುದೇ ಆಕೆಯ ಸಾವಿಗೆ ಕಾರಣ ಎಂದು ತಿಳಿದುಬಂದಿದೆ. 

ಕೇರಳದ ಚೆಲಾಯಿಲ್​ ಮೂಲದ ಬಿಜಿಶಾ ಖಾಸಗಿ ಟೆಲಿಕಾಂ ಸ್ಟೋರ್​ ಒಂದರಲ್ಲಿ ವೃತ್ತಿ ನಿರ್ವಹಿಸುತ್ತಿದ್ದಳು. 2021ರ ಡಿಸೆಂಬರ್​ 12ರಂದು ಜೊಯಿಲ್ಯಾಂಡಿನಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಿಜಿಶಾ ಮೃತದೇಹ ಪತ್ತೆಯಾಗಿತ್ತು. ಆರಂಭದಲ್ಲಿ ಆತ್ಮಹತ್ಯೆ ಹಿಂದಿನ ಕಾರಣ ಮಾತ್ರ ನಿಗೂಢವಾಗಿತ್ತು. ಆತ್ಮಹತ್ಯೆ ಪ್ರಕರಣ ನಡೆದ ತಿಂಗಳ ಬಳಿಕ ಆಕೆಯ ಸಾವಿನ ಹಿಂದಿದ್ದ ಪ್ರೇರಣೆಯನ್ನು ಪೊಲೀಸರು ಬಯಲು ಮಾಡಿದ್ದರು. ಆತ್ಮಹತ್ಯೆ ಮಾಡಿಕೊಂಡ ಬಿಜಿಶಾ ಯುಪಿಐ ಆ್ಯಪ್​ ಮುಖಾಂತರ ತನ್ನ 2 ಬ್ಯಾಂಕ್​ ಖಾತೆಗಳಲ್ಲಿ ಬರೋಬ್ಬರಿ 1 ಕೋಟಿ ರೂ. ವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿತ್ತು. ಆದರೆ, ಯಾವುದಕ್ಕಾಗಿ ಅಷ್ಟೊಂದು ಮೊತ್ತದ ಹಣಕಾಸು ವ್ಯವಹಾರ ನಡೆಸಿದ್ದಳು ಎಂದು ತಿಳಿದಿರಲಿಲ್ಲ. 

ಬಿಜಿಶಾ ಆಪ್ತರಿಗಾಗಲಿ ಅಥವಾ ಆಕೆಯ ಕುಟುಂಬಕ್ಕಾಗಲಿ ಈ ಹಣದ ವ್ಯವಹಾರದ ಬಗ್ಗೆ ಮಾಹಿತಿ ಇರಲಿಲ್ಲ. ಇದಲ್ಲದೇ ಆಕೆಯ ಮದುವೆಗಾಗಿ ಇಟ್ಟಿದ್ದ 35 ಸವರನ್​ ಚಿನ್ನವನ್ನು ಸಹ ಒತ್ತೆ ಇಟ್ಟು ಬ್ಯಾಂಕ್ ಸಾಲ ಪಡೆದಿದ್ದಳು. ಬಿಜಿಶಾ ಆತ್ಮಹತ್ಯೆ ಬಳಿಕ ಬ್ಯಾಂಕ್​ ವ್ಯವಹಾರಗಳಿಗೆ ಸಂಬಂಧಿಸಿದಂತೆ ಯಾರೂ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಕುಟುಂಬವು ಇದೇ ಸಂದರ್ಭದಲ್ಲಿ ಬಹಿರಂಗಪಡಿಸಿತ್ತು. 

ಆಕೆಯ ಸಂಪೂರ್ಣ ವಹಿವಾಟುಗಳು ಯುಪಿಐ ಅಪ್ಲಿಕೇಶನ್‌ಗಳ ಮೂಲಕವೇ ನಡೆದಿರುವುದಿಂದ ಯಾವುದೇ ಮಾಹಿತಿಯನ್ನು ಹಿಂಪಡೆಯಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಆದರೆ, ತಾಜಾ ಬೆಳವಣಿಗೆಯಲ್ಲಿ ಬಿಜಿಶಾ ಸಾವಿಗೆ ಆನ್​ಲೈನ್​ ರಮ್ಮಿ ಜೂಜಾಟವೇ ಕಾರಣ ಎಂಬುದು ಸ್ಪಷ್ಟವಾಗಿದೆ. ರಮ್ಮಿ ಗೇಮ್​ಗಾಗಿ ಬಿಜಿಶಾ 1.45 ಕೋಟಿ ರೂ. ಹಣಕಾಸು ವ್ಯವಹಾರ ನಡೆಸಿರುವುದು ಪೊಲೀಸರಿಗೆ ತಿಳಿದು ಬಂದಿದೆ. ರಮ್ಮಿ ಆಟದಿಂದ ಬಿಜಿಶಾಗೆ ಲಕ್ಷಾಂತರ ರೂ. ನಷ್ಟವಾಗಿರುವುದು ಬೆಳಕಿಗೆ ಬಂದಿದೆ. 

ಕೋವಿಡ್​ ಸಂದರ್ಭ ಬಿಜಿಶಾ ಆನ್​ಲೈನ್​ ಗೇಮ್​ನಲ್ಲಿ ಬಿಜಿಯಾಗಿದ್ದಳು ಎಂಬುದನ್ನು ತನಿಖಾ ತಂಡ ಬಯಲು ಮಾಡಿದೆ. ಆರಂಭದಲ್ಲಿ ಸಣ್ಣ ಪುಟ್ಟ ಗೇಮ್​ಗಳನ್ನು ಆಡಲು ಆರಂಭಿಸಿದ್ದ ಬಿಜಿಶಾ, ಬಳಿಕ ದೊಡ್ಡ ಮೊತ್ತದ ಆನ್‌ಲೈನ್ ರಮ್ಮಿಯಂತಹ ಆಟಗಳನ್ನು ಆಡತೊಡಗಿದ್ದಾಳೆ. ಆಕೆ ಯುಪಿಐ ಆ್ಯಪ್ ಮೂಲಕ ಆನ್‌ಲೈನ್ ಆಟಕ್ಕಾಗಿ ಹಣಕಾಸು ವಹಿವಾಟು ನಡೆಸಿದ್ದಾಳೆ. ನಿರಂತರ ಆಕೆ ಹಣ ಕಳೆದುಕೊಂಡ ಬಳಿಕ ಮನೆಯವರು ತನ್ನ ಮದುವೆಗಾಗಿ ಇಟ್ಟಿದ್ದ ಚಿನ್ನವನ್ನು ಸಹ ಒತ್ತೆ ಇಟ್ಟಿದ್ದಾಳೆ. ಇದಲ್ಲದೆ, ಆನ್‌ಲೈನ್‌ನಲ್ಲಿ ಸಾಲ ನೀಡುವ ಕೆಲವು ಕಂಪೆನಿಗಳಿಂದಲೂ ಬಿಜಿಶಾ ಸಾಕ ಪಡೆದಿದ್ದಳು. ಆದರೆ ಸಾಲವನ್ನು ಮರುಪಾವತಿಸಲು ವಿಫಲವಾದ ವಶಳೆ, ಸಾಲ ನೀಡಿರುವ ಕಂಪೆನಿಗಳು ಅವಳ ಸ್ನೇಹಿತರಿಗೆ ಸಂದೇಶಗಳನ್ನು ಕಳುಹಿಸುವ ಮೂಲಕ ಸಾಲ ಮರುಪಾವತಿಗೆ ಒತ್ತಾಯಿಸಿವೆ. ಈ ಒತ್ತಡದಿಂದಲೇ ಬಿಜಿಶಾ ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ತನಿಖಾ ತಂಡ ಹೇಳಿದೆ. 

ಅಂದಹಾಗೆ ಬಿ.ಇಡಿ ಪದವೀಧರೆಯಾಗಿದ್ದ ಬಿಜಿಶಾ ಖಾಸಗಿ ಟೆಲಿಕಾಂ ಕಂಪೆನಿಯೊಂದರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಆಕೆ ಇಷ್ಟೊಂದು ಹಣದ ವ್ಯವಹಾರ ಮಾಡಿರುವುದನ್ನು ನೋಡಿ ಪೊಲೀಸರೇ ಬೆರಗಾಗಿದ್ದರು. ಡಿಸೆಂಬರ್​ 12ರಂದು ಎಂದಿನಂತೆ ಕೆಲಸ ಮುಗಿಸಿಕೊಂಡು ಮನೆಗೆ ಮರಳಿದ ಬಳಿಕ ಆಕೆಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.

Ads on article

Advertise in articles 1

advertising articles 2

Advertise under the article