11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ: 10 - 15 ವರ್ಷದ ಕಾನೂನಿನ ಸಂಘರ್ಷಕ್ಕೊಳಗಾದ ಆರು ಬಾಲಕರ ಬಂಧನ

ರಾಂಚಿ: ಇಲ್ಲಿನ ಜಾರ್ಖಂಡ್‌ನ ಖುಂಟಿ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ 11 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಆರು ಮಂದಿ ಅಪ್ರಾಪ್ತ ಬಾಲಕರು ಅತ್ಯಾಚಾರವೆಸಗಿರುವ ಹೇಯ ಕೃತ್ಯವೊಂದು ಬೆಳಕಿಗೆ ಬಂದಿದೆ. 10 ರಿಂದ 15 ವರ್ಷ ವಯಸ್ಸಿನ ಆರು ಮಂದಿ ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಬಾಲಕಿ ಮದುವೆ ಕಾರ್ಯಕ್ರಮಕ್ಕೆಂದು ಪಕ್ಕದ ಹಳ್ಳಿಗೆ ಹೋಗಿದ್ದಳು. ಅಲ್ಲಿ‌ ನಡೆದ ನೃತ್ಯ ಕಾರ್ಯಕ್ರಮದ ಸಂದರ್ಭದಲ್ಲಿ, ಹುಡುಗಿ ತನ್ನ ಪರಿಚಯದ ಹುಡುಗರೊಂದಿಗೆ ಜಗಳವಾಡಿದ್ದಳು.

ಮಧ್ಯರಾತ್ರಿಯ ಸುಮಾರಿಗೆ ಆಕೆ ತನ್ನ  ಸ್ನೇಹಿತರಿಬ್ಬರೊಂದಿಗೆ ಮನೆಗೆ ಹಿಂದಿರುಗುತ್ತಿದ್ದರು. ಆಗ ಅವರ ಹಿಂದಿನಿಂದ ಬಂದ ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕರು ಆಕೆಯನ್ನು ತಡೆದು ಏಕಾಂಗಿ ಸ್ಥಳಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಸ್ಥಳದಿಂದ ತಪ್ಪಿಸಿಕೊಂಡ ಸ್ನೇಹಿತರಿಬ್ಬರು ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. 

ತಕ್ಷಣ ಬಾಲಕಿಯ ಪೋಷಕರು ಅವಳನ್ನು ಹುಡುಕಲು ಬಂದಿದ್ದಾರೆ. ಹುಡುಗಿಯ ಪೋಷಕರನ್ನು ಕಂಡ ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕರು ಓಡಿಹೋದರು ಎಂದು ಪೊಲೀಸರು ಹೇಳಿದರು.

ಹುಡುಗಿಯ ಕುಟುಂಬವು ಸಾಮಾಜಿಕ ಕಳಂಕದ ಕಾರಣದಿಂದಾಗಿ ಆರಂಭದಲ್ಲಿ ಪೊಲೀಸ್ ದೂರು ದಾಖಲಿಸಲು ಹಿಂದೇಟು ಹಾಕಿತ್ತು. ಆದರೆ ಕೊನೆಗೆ ಗುರುವಾರ ಮನೆಯವರು ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಇದೀಗ ತನಿಖೆ ಆರಂಭಿಸಿರುವ ಪೊಲೀಸರು ಆರು ಮಂದಿ ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕರನ್ನು ಬಂಧಿಸಿ ಸುಧಾರಣಾ ಕೇಂದ್ರಕ್ಕೆ ಕಳುಹಿಸಲಾಗಿದೆ.