
ಏನೋ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ಚಿತ್ರಕಲಾವಿದ: ಗ್ಯಾಸ್ ಸಿಲಿಂಡರ್ ಆನ್ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ
3/21/2022 08:55:00 PM
ಕೊಡಗು: ಕೆಲವೊಂದು ಬಾರಿ ಕೆಲವರು ಏನೋ ಮಾಡಲು ಹೋಗಿ ಇನ್ನೇನೋ ಆಗುತ್ತದೆ. ಅದೇ ರೀತಿಯ ಪರಿಸ್ಥಿತಿ ಇಲ್ಲೊಂದು ಕಡೆ ನಡೆದಿದೆ. ನಗರಸಭೆಯ ಕೌನ್ಸಿಲರ್ ಹಾಗೂ ಕಮಿಷನರ್ರನ್ನು ವ್ಯಂಗ್ಯವಾಗಿ ಚಿತ್ರಿಸಿ ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದ ಚಿತ್ರಕಲಾವಿದನೋರ್ವ ಇದೀಗ ಅದರ ಪರಿಸ್ಥಿತಿಯನ್ನು ಎದುರಿಸಲು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿರುವ ಪ್ರಕರಣವೊಂದು ಮಡಿಕೇರಿಯಲ್ಲಿ ನಡೆದಿದೆ.
ಮಡಿಕೇರಿ ನಗರದ ಚೈನ್ ಗೇಟ್ ಬಳಿಯ ನಿವಾಸಿ, ಚಿತ್ರಕಲಾವಿದ ಸಂದೀಪ್ ನಗರಸಭೆಗೆ ಸೇರಿರುವ ಸ್ಥಳದಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಅಕ್ರಮ ಸಕ್ರಮದಡಿಯಲ್ಲಿ ಅರ್ಜಿಯನ್ನೂ ಹಾಕಿದ್ದರು. ಈ ನಡುವೆ ನಗರಸಭೆಯ ಕೌನ್ಸಿಲರ್ ಹಾಗೂ ಕಮಿಷನರ್ ಅವರನ್ನು ವ್ಯಂಗ್ಯವಾಗಿ ಚಿತ್ರಿಸಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದರು.
ಆ ಬಳಿಕ ಕಮಿಷನರ್ ರಾಮದಾಸ್ ಜೆಸಿಬಿಯಿಂದ ಸಂದೀಪ್ ಮನೆ ಕೆಡವಲು ಬಂದಿದ್ದಾರೆ. ಆಗ ಸಂದೀಪ್ ಹಾಗೂ ಅವರ ಹೆತ್ತವರು ಅಡುಗೆ ಅನಿಲದ ಸಿಲಿಂಡರ್ ಆನ್ ಮಾಡಿಟ್ಟು, ಬೆಂಕಿಪೊಟ್ಟಣ ಹಿಡಿದುಕೊಂಡು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದಾರೆ. ಸದ್ಯ ಸಂದೀಪ್ ವಿರುದ್ಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.