-->

ಸಿಲಿಂಡರ್ ಸ್ಪೋಟದಿಂದ 10ಮಂದಿ ಸಾವು: ಸೀಮಂತದ ಮನೆಯಲ್ಲಿ ಸಾವಿನ ಸೂತಕ

ಸಿಲಿಂಡರ್ ಸ್ಪೋಟದಿಂದ 10ಮಂದಿ ಸಾವು: ಸೀಮಂತದ ಮನೆಯಲ್ಲಿ ಸಾವಿನ ಸೂತಕ

ಯಾದಗಿರಿ: ಸೀಮಂತ ಸಂಭ್ರಮದಲ್ಲಿದ್ದ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಒಂಬತ್ತು ಮಂದಿಯನ್ನು ಬಲಿ ಪಡೆದ ಘಟನೆಯೊಂದು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಂತಸದಲ್ಲಿರಬೇಕಾದ ಮನೆಯಲ್ಲೀಗ ನಿರಂತರ ಸಾವಿನ ಸೂತಕದ ಕಾವು ಏರುತ್ತಿದೆ.

ಫೆ.25ರಂದು ಕೃಷ್ಣಾ ಭಾಗ್ಯ ಜಲನಿಗಮದ (ಕೆಬಿಜೆಎನ್​ಎಲ್​) ನಿವೃತ್ತ ನೌಕರರೋರ್ವರ ಮನೆಯಲ್ಲಿ ಸೀಮಂತ ಕಾರ್ಯಕ್ರಮ ನಡೆದಿತ್ತು. ಈ ಸಂದರ್ಭ ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಘಟನೆಯಲ್ಲಿ 8 ಮಂದಿಯ ಪರಿಸ್ಥಿತಿ ಚಿಂತಾಜನಕವಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಘಟನೆ ನಡೆದ ದಿನವೇ ಚಿಕಿತ್ಸೆ ಫಲಕಾರಿಯಾಗದೆ ಮಹಾಂತೇಶ (15 ತಿಂಗಳ ಮಗು), ಆದ್ಯಾ (3) ಹಾಗೂ ನಿಂಗಮ್ಮ (85) ಹಾಗೂ ಮರುದಿನ ಗಂಗಮ್ಮ (51) ಎಂಬಾಕೆ ಮೃತಪಟ್ಟಿದ್ದರು. ನಾಲ್ಕನೇ ದಿನ ಶ್ವೇತಾ(6) ಎಂಬ ಬಾಲಕಿ ಮೃತಪಟ್ಟಿದ್ದಳು.

ನಿನ್ನೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಳಿದ ಗಾಯಾಳುಗಳ ಪೈಕಿ ಐದು ಮಂದಿ ಮೃತಪಟ್ಟಿದ್ದಾರೆ. ಕಲ್ಲಪ್ಪ ಶರಣಪ್ಪ ಲಕ್ಕಶೆಟ್ಟಿ (48), ಭೀಮರಾಯ ಶಿವಪ್ಪ (78) ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಹಾಗೂ ವೀರಬಸಪ್ಪ ಮಲ್ಲಣ್ಣ (25), ಚನ್ನವೀರ ಸಂಗಣ್ಣ ಮ್ಯಾಳಗಿ (30) ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಸಿಲಿಂಡರೊಂದು ಸ್ಫೋಟಗೊಂಡ ಪರಿಣಾಮ ಸತ್ತವರ ಸಂಖ್ಯೆ ಹತ್ತಕ್ಕೆ ಏರಿದೆ. ಉಳಿದ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ.

ಮೃತಪಟ್ಟ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ 5 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಅಷ್ಟೇ ಅಲ್ಲದೆ ಉಳಿದ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ. ಇತ್ತ ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ.

Ads on article

Advertise in articles 1

advertising articles 2

Advertise under the article