ಚಹಾ ತಯಾರಿಸಿ ಲಕ್ಷ ರೂ. ಬಹುಮಾನ ಗೆಲ್ಲುವ ಅವಕಾಶ!

ತೆಲಂಗಾಣ: ಚಹಾದಲ್ಲಿ ಇರುವಷ್ಟು ವಿಭಿನ್ನ ಬಗೆ ಬೇರಾವ ಪಾನೀಯಗಳಲ್ಲಿಯೂ ಇಲ್ಲವೆನೋ ಎನ್ನಬಹುದಾದಷ್ಟು ಇದೆ ಎನ್ನಬಹುದು. ಒಂದೊಂದು ಪ್ರಾಂತ್ಯಕ್ಕೂ, ಒಂದೊಂದು ರಾಜ್ಯಕ್ಕೂ, ಒಂದೊಂದು ದೇಶಕ್ಕೂ ವೆರೈಟಿ, ವೆರೈಟಿ ಚಹಾಗಳು ದೊರೆಯುತ್ತವೆ. ಅದರಲ್ಲಿಯೂ ಚೀನಾ ಒಂದೇ ದೇಶದಲ್ಲಿ ನೂರಾರು ಬಗೆಯ ವೆರೈಟಿ ಚಹಾಗಳು ದೊರೆಯುತ್ತದೆ. 

ನಿಮಗೂ ಇಂತಹ ಅಪರೂಪದ ಸ್ವಾದಿಷ್ಟವಾಗಿರುವ ಚಹಾ ಮಾಡಲು ಬಂದಲ್ಲಿ 1 ಲಕ್ಷ ರೂ. ಬಹುಮಾನ ಗೆಲ್ಲುವ ಅವಕಾಶವನ್ನು ಹೈದರಾಬಾದ್​ನ ಟೀ ಕಂಪೆನಿಯೊಂದು ನೀಡಿದೆ. ಇದೇ ಮೊದಲ ಬಾರಿಗೆ ಈ ಟೀಕಂಪೆನಿ ಟೀ ಚಾಂಪಿಯನ್​ಶಿಪ್ ಆಯೋಜನೆ ಮಾಡಲು ಸಿದ್ಧವಾಗಿದೆ. ಈ ಚಾಂಪಿಯನ್​​ಶಿಪ್​ನಲ್ಲಿ ಗೆಲುವು ಸಾಧಿಸಿದವರಿಗೆ 1 ಲಕ್ಷ ರೂ. ಬಹುಮಾನ ದೊರೆಯಲಿದೆ. 

ಅಂದಹಾಗೆ ಈ ಸ್ಪರ್ಧೆಯಲ್ಲಿ ಮಹಿಳೆಯರಿಗೆ ಮಾತ್ರ ಸ್ಪರ್ಧಿಸಲು ಅವಕಾಶವಿದೆ. ಅಂತಾರಾಷ್ಟ್ರೀಯ ಮಹಿಳಾ ದಿನದ ಸಲುವಾಗಿ ಮಾರ್ಚ್ 6ರಂದು ಮಹಿಳೆಯರಿಗಾಗಿ ಈ ಚಾಂಪಿಯನ್ ಶಿಪ್ ಅನ್ನು ಆಯೋಜನೆ ಮಾಡಲಾಗಿದೆ. ಮೊದಲ ಬಹುಮಾನ 1 ಲಕ್ಷ ರೂ. ದ್ವಿತೀಯ ಹಾಗೂ ತೃತೀಯ ಬಹುಮಾನ ಕ್ರಮವಾಗಿ 50 ಸಾವಿರ ಮತ್ತು 25 ಸಾವಿರ ರೂ. ದೊರೆಯಲಿದೆ. 

ಈ ಚಾಂಪಿಯನ್​​ಶಿಪ್​ ಹೈದರಾಬಾದ್‌ನ ಹೈಟೆಕ್ ಸಿಟಿಯ ನೋವಾಟೆಲ್ ಹೋಟೆಲ್‌ನಲ್ಲಿ ನಡೆಯಲಿದೆ. ಮಾರ್ಚ್ 6ರ ಮಧ್ಯಾಹ್ನ 3ಗಂಟೆಗೆ ಸ್ಪರ್ಧೆ ಆರಂಭವಾಗಲಿದೆ. ಆಸಕ್ತ ಮಹಿಳೆಯರು ತಾವು ತಯಾರಿಸುವ ಚಹಾದ ಬಗ್ಗೆ ಒಂದು ನಿಮಿಷದ ವೀಡಿಯೋವನ್ನು ವಾಟ್ಸ್​​ಆ್ಯಪ್​ ಸಂಖ್ಯೆ 8340974747 ನಂಬರ್​ಗೆ ಕಳುಹಿಸಬೇಕು. 

ಈ ರೀತಿಯಾಗಿ ವೀಡಿಯೋ ಕಳುಹಿಸಿದ ನೂರು ಮಂದಿಯನ್ನು ಆಯೋಜಕರು ಚಾಂಪಿಯನ್​ಶಿಪ್​ಗೆ ಆಯ್ಕೆ ಮಾಡುತ್ತಾರೆ. ಆಯ್ಕೆಯಾದ ಸ್ಪರ್ಧಿಗಳು ಮಾರ್ಚ್ 6ರಂದು ನೊವಾಟೆಲ್ ಹೋಟೆಲ್‌ಗೆ ಆಗಮಿಸಿ, ಚಹಾವನ್ನು ತಯಾರಿಸಬೇಕು. ಅಲ್ಲಿಗೆ ಬರುವ ಅತಿಥಿಗಳು ಚಹಾವನ್ನು ರುಚಿ ನೋಡುತ್ತಾರೆ. ಅವರ ಸ್ವಾದಿಷ್ಟಕ್ಕೆ ಅನುಗುಣವಾಗಿ ಯಾರಿಗೆ ಬಹುಮಾನ ಎಂದು ಘೋಷಣೆ ಮಾಡಲಾಗುತ್ತದೆ.
BREAKING NEWS
Loading latest news...
Join our WhatsApp Channel Powered By : Online Pudu