
ಮೊಬೈಲ್ ಕೊಡಿಸಲಿಲ್ಲವೆಂದು ಆತ್ಮಹತ್ಯೆಯ ಹಾದಿ ಹಿಡಿದ ಪಿಯುಸಿ ವಿದ್ಯಾರ್ಥಿ
2/20/2022 01:10:00 AM
ವಿಜಯನಗರ: ಮೊಬೈಲ್ ಫೋನ್ ತೆಗೆದು ಕೊಡಲಿಲ್ಲವೆಂದು ಪಿಯುಸಿ ವಿದ್ಯಾರ್ಥಿಯೋರ್ವನು ಪೆಟ್ರೋಲ್ ಸುರಿದುಕೊಂಡು, ಕೆರೆಗೆ ಹಾರಿ ಆತ್ಮಹತ್ಯೆ ಮಾಡಿರುವ ಘಟನೆ ವಿಜಯನಗರದ ಕೊಟ್ಟೂರು ತಾಲೂಕಿನ ತೂಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪ್ರಥಮ ಪಿಯುಸಿ ಓದುತ್ತಿದ್ದ ನಾಗರಾಜ(17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
ನಾಗರಾಜ ಮೊಬೈಲ್ ಫೋನ್ ಕೊಡಿಸಿಲ್ಲವೆಂದು ಫೆ.16 ರಂದು ಹೆತ್ತವರ ಮೇಲೆ ಕೋಪಗೊಂಡು ಮನೆ ಬಿಟ್ಟು ಹೋಗಿದ್ದ. ನಂತರ ಆತನ ಮೃತದೇಹ ಕೊಟ್ಟೂರು ಕೆರೆಯಲ್ಲಿ ಪತ್ತೆಯಾಗಿದೆ. ಆದರೆ ಆತ ಸಂಪೂರ್ಣ ಸುಟ್ಟು ಕರಕಲಾಗಿದ್ದ. ಸನ್ನಿಧಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ. ಈತ ತನ್ನ ಓದಿಗಾಗಿ ಮೊಬೈಲ್ ಫೋನ್ ಕೊಡಿಸುವಂತೆ ಪಾಲಕರ ಬಳಿ ಹಟ ಹಿಡಿದಿದ್ದ.
ಆದರೆ ಕೆಲವೊಂದು ಕಾರಣಕ್ಕೆ ಅವರಿಗೆ ಫೋನ್ ಕೊಡಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಬೇಸರಗೊಂಡಿದ್ದ ಬಾಲಕ ಮನೆಬಿಟ್ಟು ಹೋಗಿದ್ದ. ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಂಚಿಕೊಂಡು ಬಳಿಕ ಕೆರೆಗೆ ಹಾರಿರುವ ಶಂಕೆ ವ್ಯಕ್ತವಾಗಿದೆ. ವಿಜಯನಗರ ಜಿಲ್ಲೆಯ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.