ಮಂಗಳೂರು: ಅಪ್ರಾಪ್ತೆಯರು, ಯುವತಿಯರನ್ನೇ ಟಾರ್ಗೆಟ್ ಮಾಡಿ ವೇಶ್ಯಾವಾಟಿಕೆ; ಇಬ್ಬರು ಮಹಿಳೆಯರು ಸೇರಿ ಮೂವರು ಅರೆಸ್ಟ್

ಮಂಗಳೂರು: ಕಾಲೇಜು ವಿದ್ಯಾರ್ಥಿನಿಯರು ಸೇರಿದಂತೆ ಯುವತಿಯರನ್ನೇ ಟಾರ್ಗೆಟ್ ಮಾಡಿಕೊಂಡು ಬಾಡಿಗೆ ಅಪಾರ್ಟ್‌ಮೆಂಟ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಪ್ರಕರಣವನ್ನು ‌ಬೇಧಿಸಿರುವ ಮಂಗಳೂರು ಪೊಲೀಸರು ಇಬ್ಬರು ಮಹಿಳೆಯರು ಸೇರಿ ಓರ್ವ ಪುರುಷನನ್ನು ಅರೆಸ್ಟ್ ಮಾಡಿದ್ದಾರೆ.

ಶಮೀನಾ, ಆಯಿಷಮ್ಮ, ಸಫ್ವಾನ್ ಬಂಧಿತ ಆರೋಪಿಗಳು. ಪ್ರಕರಣದಲ್ಲಿ ಪಿಯುಸಿ ಓದುತ್ತಿದ್ದ ಇಬ್ಬರು ಅಪ್ರಾಪ್ತೆಯರು ಸೇರಿದಂತೆ ಒಟ್ಟು ನಾಲ್ವರನ್ನು ಪೊಲೀಸರು ರಕ್ಷಿಸಿದ್ದಾರೆ. 


ಆರೋಪಿಗಳು ಮಂಗಳೂರಿನ ನಂದಿಗುಡ್ಡದ ರಿಯಾನಾ ರೆಸಿಡೆನ್ಸಿಯ ಐದನೇ ಮಹಡಿಯಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಇವರು ಯುವತಿಯರಿಗೆ, ಅಪ್ರಾಪ್ತ ಬಾಲಕಿಯರಿಗೆ ಹಣದ ಆಮಿಷವೊಡ್ಡಿ ವೇಶ್ಯಾವಾಟಿಕೆ ನಡೆಸಲು ಪ್ರಚೋದಿಸುತ್ತಿದ್ದರು‌.  ಅವರು ಒಪ್ಪದಿದ್ದಾಗ ಮನೆಗೆ ಬಂದಿರುವಾಗ ತೆಗೆದಿರಿಸಲಾಗಿದ್ದ ವೀಡಿಯೋ ದೃಶ್ಯಾವಳಿಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿ ವೇಶ್ಯಾವಾಟಿಕೆ ನಡೆಸಲು ಒತ್ತಾಯಿಸುತ್ತಿದ್ದರು. 

ಈ ಬಗ್ಗೆ ಅಪ್ರಾಪ್ತೆಯೋರ್ವಳು  ಈ ಜಾಲದಲ್ಲಿ ಸಿಲುಕಿರುವ ಬಗ್ಗೆ ಕಾಲೇಜು ಪ್ರಾಂಶುಪಾಲರಿಗೆ ವಿಚಾರ ತಿಳಿದು‌ ಚೈಲ್ಡ್ ಲೈನ್ ನವರ ಗಮನಕ್ಕೆ ತಂದಿದ್ದಾರೆ. ಚೈಲ್ಡ್ ಲೈನ್ ನವರು ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪೊಕ್ಸೊ ಕಾಯ್ದೆ, ಐ.ಟಿ.ಪಿ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿ ಮೂವರನ್ನು ಬಂಧಿಸಿದ್ದಾರೆ.‌ ಹೆಚ್ಚಿನ ತನಿಖೆ ನಡೆಸಲು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಸಿಸಿಬಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಕಾನೂನು ಸುವ್ಯವಸ್ಥೆ ವಿಭಾಗದ ಡಿ.ಸಿ.ಪಿ ಹರಿರಾಂ ಶಂಕರ್ ಮೇಲುಸ್ತುವಾರಿಯಲ್ಲಿ ತನಿಖೆಗೆ ಸೂಚನೆ ನೀಡಿದ್ದಾರೆ.