ಕಾಸ್ಟಿಂಗ್ ಕೌಚ್ ಬಗ್ಗೆ ತಮ್ಮ ಅನುಭವವನ್ನು ಬಿಚ್ಚಿಟ್ಟ ತೆಲುಗು ನಟಿ!

ಹೈದರಾಬಾದ್​: ಈಗೀಗ ಸಿನಿಮಾ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಮಾಮೂಲಿ ಎಂಬಂತಾಗಿದೆ. ಈಗಾಗಲೇ ಸಾಕಷ್ಟು ಮಂದಿ ನಟಿಯರು ಇಲ್ಲಿ ನಡೆಯುವ ಕಾಸ್ಟಿಂಗ್​ ಕೌಚ್​ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕರು, ನಟರು, ನಿರ್ಮಾಪಕರು ಅವಕಾಶದ ನೆಪದಲ್ಲಿ ತಮ್ಮ ಬಯಕೆಗಳನ್ನು ಈಡೇರಿಸುವಂತೆ ನಟಿಯರನ್ನು ಒತ್ತಾಯಿದುವುದು ಸಿನಿಮಾ ಇಂಡಸ್ಟ್ರಿಗೆ ಅಂಟಿಕೊಂಡಿರುವ ಶಾಪದಂತಿದೆ. 

ಬಾಲಿವುಡ್​, ಟಾಲಿವುಡ್​, ಕಾಲಿವುಡ್​, ಸ್ಯಾಂಡಲ್​ವುಡ್​ ಹಾಗೂ ಮಾಲಿವುಡ್​ಗಳಲ್ಲಿ ನಡೆಯುವ ಕಾಸ್ಟಿಂಗ್​ ಕೌಚ್​ನಿಂದ ಅನೇಕ ನಟಿಯರು ಸಂತ್ರಸ್ತೆಯರಾಗಿದ್ದಾರೆ. ಹಲವಾರು ಮಂದಿ ಅದನ್ನು ಎದುರಿಸಿದ್ದಾರೆ. ಸಾಕಷ್ಟು ನಟಿಯರು ತಮಗಾದ ಕಹಿ ಅನುಭವಗಳನ್ನು ಧೈರ್ಯವಾಗಿ ಹೇಳಿಕೊಂಡೂ ಇದ್ದಾರೆ. ಇದೀಗ ಆ ಸಾಲಿಗೆ ಮತ್ತೊಬ್ಬ ತೆಲುಗು ನಟಿ ಸ್ನೇಹಾ ಶರ್ಮಾ ಸೇರಿಕೊಂಡಿದ್ದಾರೆ.

ಇತ್ತೀಚೆಗೆ ತೆಲುಗಿನ “ಐ ವಾಂಟ್​ ಮೈ ಲವ್​” ಸಿನಿಮಾ ಪ್ರಚಾರದ ವೇಳೆ ನಟಿ ಸ್ನೇಹಾ ಶರ್ಮಾ ತಮಗಾದ ಕಾಸ್ಟಿಂಗ್​ ಕೌಚ್​ ಅನುಭವದ ಬಗ್ಗೆ ಮಾಡಿರುವ ಕಾಮೆಂಟ್​ ಭಾರೀ ಸಂಚಲನವನ್ನು ಸೃಷ್ಟಿಸಿದೆ. ತನ್ನನ್ನು ಅವಕಾಶಕ್ಕಾಗಿ ಮಂಚವೇರಲು ಹಲವರು ಕರೆದಿದ್ದಾರೆ. ನಾನು ಆಗೋದಿಲ್ಲ ಎಂದಿದ್ದಕ್ಕೆ ಸಿನಿಮಾಗಳಿಂದ ನನ್ನ ಹೆಸರನ್ನು ಕೈಬಿಡಲಾಯಿತು. ದೊಡ್ಡ ದೊಡ್ಡ ಸಿನಿಮಾಗಳ ಅವಕಾಶವನ್ನೂ ಇದರಿಂದ ಕಳೆದುಕೊಂಡಿದ್ದೇನೆ. ಭಿಕ್ಷುಕರೂ ಕೂಡ ಬದುಕು ನಡೆಸುತ್ತಾರೆ. ನಾನು ಭಿಕ್ಷೆ ಮಾಡಿ ಜೀವನ ನಡೆಸುತ್ತೇನೆ, ಆದರೆ ನನ್ನ ಬದ್ಧತೆ ಮಾತ್ರ ಬಿಡುವುದಿಲ್ಲ ಎಂದು ಹೇಳಿದೆ ಎಂದರು.

ಅಲ್ಲದೆ ಸ್ನೇಹಾ ಮಾತು ಮುಂದುವರಿಸಿ, ಸಿನಿಮಾ ಇಂಡಸ್ಟ್ರಿಯಲ್ಲಿ ಇವೆಲ್ಲ ಸಾಮಾನ್ಯವಾಗಿವೆ. ಇಲ್ಲಿ ಯಾವುದೇ ಒತ್ತಾಯಗಳಿರುವುದಿಲ್ಲ. ಎಲ್ಲವೂ ನಮ್ಮ ಮೇಲೆ ನಿರ್ಧಾರವಾಗಿರುತ್ತದೆ. ಕೇಳುವವರು ಕೇಳುತ್ತಾರೆ. ಆದರೆ ಫಲಿತಾಂಶವನ್ನು ನಾವೇ ಎದುರಿಸಬೇಕಾಗುತ್ತದೆ ಎಂದಿದ್ದಾರೆ.

ಸಿನಿಮಾ ಇಂಡಸ್ಟ್ರಿಯಲ್ಲಿ ಆಮಿಷಗಳನ್ನೊಡ್ಡುವವರ ವಿರುದ್ಧ  ಕಠಿಣ ಕ್ರಮ ಕೈಗೊಂಡರೆ ಉತ್ತಮ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿಂದೆ ಅನೇಕ ಸ್ಟಾರ್ ನಟಿಯರು ತಮಗೆ ಇಂಡಸ್ಟ್ರಿಯಲ್ಲಾದ ಕಾಸ್ಟಿಂಗ್ ಕೌಚ್ ಅನುಭವವನ್ನು ಬಹಿರಂಗಪಡಿಸಿದ್ದಾರೆ. ಕಾಸ್ಟಿಂಗ್ ಕೌಚ್​ನಿಂದಾಗಿ ಸಾಮಾನ್ಯ ಪ್ರೇಕ್ಷಕರಲ್ಲಿಯೂ ಚಿತ್ರರಂಗದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತದೆ ಎಂಬುದನ್ನು ಮುಖ್ಯವಾಗಿ ಗಮನಿಸಬೇಕು.