
ಸಾಲೆತ್ತೂರು: ಮದುಮಗನಿಗೆ ಕೊರಗಜ್ಜನ ವೇಷ ಭೂಷಣ ಧರಿಸಿ ಅವಹೇಳನದ ವೀಡಿಯೋ ವೈರಲ್; ಕಠಿಣ ಕ್ರಮಕ್ಕೆ ಆಗ್ರಹ
1/07/2022 02:40:00 AM
ವಿಟ್ಲ: ಮುಸ್ಲಿಂ ಮದುವೆ ಸಮಾರಂಭದಲ್ಲಿ ಮದುಮಗನಿಗೆ ಕೊರಗಜ್ಜನ ವೇಷ ಹಾಕಿ ಆತನ ಸಹಚರರು ಕುಣಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಲಾಗಿದೆ ಎಂಬ ಆರೋಪವು ಕೇಳಿ ಬಂದಿದೆ.
ಕೊಳ್ನಾಡು ಗ್ರಾಮದ ಅಝೀಝ್ ಎಂಬವರ ಪುತ್ರಿಯ ಮದುವೆ ದಿನ ಈ ಘಟನೆ ನಡೆದಿದೆ. ಮಂಜೇಶ್ವರ ತಾಲೂಕಿನ ಉಪ್ಪಳದ ಯುವಕನೊಂದಿಗೆ ಅಝೀಝ್ ಅವರ ಪುತ್ರಿಯ ವಿವಾಹ ಮಧ್ಯಾಹ್ನ ನಡೆದಿತ್ತು. ಅದೇ ದಿನ ಮಧ್ಯರಾತ್ರಿ ಮುಸ್ಲಿಂ ಸಂಪ್ರದಾಯದಂತೆ ವರ ತನ್ನ 50ಕ್ಕೂ ಹೆಚ್ಚು ಸಹಚರರೊಂದಿಗೆ ವಧುವಿನ ಮನೆಗೆ ಆಗಮಿಸಿದ್ದಾನೆ.
ಈ ವೇಳೆ ವರನ ಬಳಗವು ವಧುವಿನ ಮನೆ ಮುಂದೆ ರಸ್ತೆಯಲ್ಲಿ ಹಾಡು ಹಾಡುತ್ತಾ ಕುಣಿಯುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲದೆ ವರನಿಗೆ ತುಳುನಾಡಿನ ಆರಾಧ್ಯ ದೈವ ಕೊರಗಜ್ಜನ ವೇಷ ಭೂಷಣವನ್ನು ಹಾಕಲಾಗಿತ್ತು. ಆತನ ತಲೆಗೆ ಮುಟ್ಟಾಲೆ (ಅಡಿಕೆ ಹಾಳೆಯ ಟೋಪಿ) ಹಾಕಿ ಮುಖಕ್ಕೆ ಮಸಿಯನ್ನು ಬಳಿದುಕೊಂಡು, ಗಡ್ಡವನ್ನು ಬಿಳಿ ಮಾಡಿಕೊಂಡು ಹಾಡನ್ನು ಹಾಡುತ್ತಾ, ಕುಣಿದಾಡುತ್ತಾ ಆಗಮಿಸಿದ್ದಾರೆ ಎನ್ನಲಾಗಿದೆ.
ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡುವಂತಿದೆ ಎಂದು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬಗ್ಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಗಳು ಕೇಳಿ ಬರುತ್ತಿವೆ.