-->
ಜ್ಯೋತಿಷಿ 'ಭವಿಷ್ಯ'ವನ್ನು ನಂಬಿ ಬಲಿಯಾಯ್ತು ತಾಯಿ - ಮಗಳ ಜೀವ

ಜ್ಯೋತಿಷಿ 'ಭವಿಷ್ಯ'ವನ್ನು ನಂಬಿ ಬಲಿಯಾಯ್ತು ತಾಯಿ - ಮಗಳ ಜೀವ

ಕೊಯಮತ್ತೂರು: ಜ್ಯೋತಿಷಿಯ ಮಾತನ್ನು ಕೇಳಿ ಮಹಿಳೆಯೋರ್ವರು ಪುತ್ರಿಯನ್ನೂ ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಭಯಾನಕ ಘಟನೆಯೊಂದು ಕೊಯಮತ್ತೂರಿನ ಅಪ್ಪನಾಯಕನಪಾಳ್ಯಂನಲ್ಲಿ ನಡೆದಿದೆ.

ಅಪ್ಪನಾಯಕನಪಾಳ್ಯಂನ ಧನಲಕ್ಷ್ಮಿ (58) ಮತ್ತು ಸುಕನ್ಯಾ (30) ಮೃತಪಟ್ಟ ದುರ್ದೈವಿಗಳು. 

ಧನಲಕ್ಷ್ಮಿಯವರು ತಮ್ಮ ವಿಶೇಷ ಚೇತನೆ ಮಗಳು ಸುಕನ್ಯಾರೊಂದಿಗೆ ವಾಸವಾಗಿದ್ದರು. ಧನಲಕ್ಷ್ಮಿ ಸದಾ ಸ್ಥಳೀಯ ಜ್ಯೋತಿಷಿಯೋರ್ವರ ಮಾತನ್ನು ಬಲವಾಗಿ ನಂಬುತ್ತಿದ್ದರು. ಇದೇ ಜ್ಯೋತಿಷಿಯು ಮುಂದೊಂದು ದಿನ ತಾವು ಕೂಡ ಮಗಳಂತೆ ಕೈ ಅಥವಾ ಕಾಲನ್ನು ಕಳೆದುಕೊಳ್ಳುತ್ತೀರಿ ಎಂದು ಧನಲಕ್ಷ್ಮಿಯವರಿಗೆ ಭೀತಿಯೊಂದನ್ನು ಹುಟ್ಟಿಸಿಬಿಟ್ಟಿದ್ದಾನಂತೆ.

ಇದನ್ನೇ ನಂಬಿದ ಧನಲಕ್ಷ್ಮಿಯವರು ತಮ್ಮ ಮಗ ಶಶಿಕುಮಾರ‌ ಅವರಿಗೆ ಕರೆ ಮಾಡಿದ್ದಾರೆ. ಶಶಿಕುಮಾರ್‌ ದೂರದ ಸರವಣಂಪಟ್ಟಿಯಲ್ಲಿ ವಾಸಿಸುತ್ತಿದ್ದಾರೆ. ಧನಲಕ್ಷ್ಮಿ ಪುತ್ರನಿಗೆ ಕರೆ ಮಾಡಿ, ‘ನನಗೆ ತುಂಬಾ ಭಯವಾಗುತ್ತಿದೆ. ಜ್ಯೋತಿಷಿಯವರು ಮುಂದೊಂದು ದಿನ ತನಗೂ ಕೈ ಅಥವಾ ಕಾಲು ಕಳೆದುಕೊಳ್ಳುವ ಸಂಭವವಿದೆ. ಮಗಳಂತೆಯೇ ತನಗೂ ಸಮಸ್ಯೆ ಬರುತ್ತದೆ ಎಂದಿದ್ದಾರೆ. ಹೀಗೆ ಆದರೆ ನಮ್ಮನ್ನು ನೋಡಿಕೊಳ್ಳುವವರು ಯಾರ ಇರೋದಿಲ್ಲ. ಹೀಗಾಗಿ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ’ ಎಂದಿದ್ದಾರೆ. 

ಇದನ್ನು ಕೇಳಿದ ಪುತ್ರ ಶಶಿಕುಮಾರ್‌ ಗಾಬರಿಯಾಗಿದ್ದಾರೆ.‌ ಅಲ್ಲದೆ ‘ಅದನ್ನೆಲ್ಲಾ ನಂಬಬೇಡ. ಹಾಗೆಲ್ಲಾ ಏನೂ ಆಗುವುದಿಲ್ಲ. ಒಂದೊಮ್ಮೆ ಆ ರೀತಿಯಾದರೂ ನಾನು ಇದ್ದೇನೆ ನೋಡಿಕೊಳ್ಳಲು’ ಎಂದಿದ್ದಾರೆ. ಆದರೆ ಮರುದಿನ ತಾಯಿಗೆ ಕರೆ ಮಾಡಿದರೆ ಅವರು ಕರೆಯನ್ನು ಸ್ವೀಕರಿಸಲೇ ಇಲ್ಲ. 

ಇದರಿಂದ ಭಯಗೊಂಡ ಶಶಿಕುಮಾರ್, ಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಪಕ್ಕದ ಮನೆಯವರು ಮನೆಗೆ ಹೋಗಿ ನೋಡಿದಾಗ ತಾಯಿ, ಮಗಳು ಮೃತದೇಹವಾಗಿ ಬಿದ್ದಿರುವುದು ಕಂಡು ಬಂದಿದೆ. ಧನಲಕ್ಷ್ಮಿಯವರು ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದರೆ, ಪುತ್ರಿ ಸುಕನ್ಯಾ ಬಾಯಿಯಲ್ಲಿ ನೊರೆ ಕಂಡು ಬಂದಿದೆ. 

ಮೃತದೇಹಗಳನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಧನಲಕ್ಷ್ಮಿ ಮೊದಲು ಮಗಳಿಗೆ ವಿಷವುಣಿಸಿದ ಬಳಿಕ ತಾವೂ ಆತ್ಮಹತ್ಯೆಗೆ ಶರಣಾಗಿರುವುದು ತಿಳಿದುಬಂದಿದೆ. 

Ads on article

Advertise in articles 1

advertising articles 2

Advertise under the article