ಬೆಂಗಳೂರು: ಮಹಿಳಾ ಪ್ರಯಾಣಿಕರ ಎದುರೇ ಹಸ್ತಮೈಥುನ ಮಾಡಿದ ಓಲಾ ಕ್ಯಾಬ್‌ ಚಾಲಕ

ಬೆಂಗಳೂರು: ಓಲಾ ಕ್ಯಾಬ್‌ ಚಾಲಕನೋರ್ವನು ಮಹಿಳಾ ಪ್ರಯಾಣಿಕರೊಬ್ಬರ ಮುಂಭಾಗವೇ ಹಸ್ತಮೈಥುನ ಮಾಡಿ ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಈ ಬಗ್ಗೆ ಸಂತ್ರಸ್ತ ಮಹಿಳೆ ಟ್ವಿಟರ್‌ ಮೂಲಕ ಘಟನೆಯನ್ನು ವಿವರಿಸಿದ್ದಾರೆ. “ಗುರುವಾರ ತಾನು ತಡರಾತ್ರಿ  ಕೆಲಸ ಮುಗಿಸಿ ರಾತ್ರಿ ಮನೆಗೆ ತೆರಳಲೆಂದು ಓಲಾ ಕ್ಯಾಬ್‌ ಅನ್ನು ಬುಕ್‌ ಮಾಡಿದ್ದೆ. ಕ್ಯಾಬ್‌ನಲ್ಲಿ ಹೋಗುವಾಗ ಚಾಲಕ ಹಸ್ತಮೈಥುನ ಮಾಡಿಕೊಳ್ಳಲು ಆರಂಭಿಸಿದ್ದಾನೆ. ಅದನ್ನು ನಾನು ಗಮನಿಸಿದೆ. ತಕ್ಷಣ ಆತ ಮುಚ್ಚಿಕೊಂಡು ಏನು ನಡೆಯದುರುವಂತೆ ವರ್ತಿಸಲು ಆರಂಭಿಸಿದ್ದಾನೆ. ಆಗ ನಾನು ಕೊಂಚ ಧೈರ್ಯ ಮಾಡಿ ಕಿರುಚಾಡಿದೆ‌. ಆಗ ಆತ ಕ್ಯಾಬ್‌ ನಿಲ್ಲಿಸಿದ. ಬಳಿಕ ನಾನು ಕೆಳಗೆ ಇಳಿದುಕೊಂಡು ಮತ್ತೂಂದು ಕ್ಯಾಬ್‌ನಲ್ಲಿ ಮನೆಗೆ ತೆರಳಿದೆ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಮಹಿಳೆಯರು ಸುರಕ್ಷಿತೆಯ ದೃಷ್ಟಿಯಿಂದ ಒಂಟಿಯಾಗಿ ಕ್ಯಾಬ್‌ಗಳಲ್ಲಿ ತೆರಳುವ ಸಂದರ್ಭ ಪರಿಚಿತರ ಸಂಪರ್ಕದಲ್ಲಿರಬೇಕು. ಪ್ರಯಾಣವನ್ನು ಟ್ರ್ಯಾಕ್‌ ಮಾಡಲು ಲೈವ್‌ ಲೊಕೇಶನ್‌ ಹಂಚಿಕೊಳ್ಳಬೇಕು. ಈ ಘಟನೆಯ ಸಂಬಂಧ ಓಲಾ ಕಂಪನಿಗೆ ದೂರು ನೀಡಿದ್ದೇನೆ. ಓಲಾ ಸಂಸ್ಥೆಯು ಚಾಲಕನನ್ನು ಕೆಲಸದಿಂದ ವಜಾ ಮಾಡಿದೆ ಎಂದು ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ ಎಂದು‌ ಮಹಿಳೆ ಉಲ್ಲೇಖಿಸಿದ್ದಾರೆ.

ಟ್ವಿಟ್‌ರ್‌ನಲ್ಲಿ ಪ್ರತಿಕ್ರಿಯಿಸಿರುವ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌, ಈ ಘಟನೆ ಬಗ್ಗೆ ಕ್ಷಮೆ ಇರಲಿ. ನಿಮ್ಮ ದೂರನ್ನು ಗಂಭೀರವಾಗಿ ಪರಿಗಣಿಸಿದ್ದು, ಅಸಭ್ಯ ವರ್ತನೆ ತೋರಿರುವ ಕ್ಯಾಬ್‌ ಚಾಲಕನ ಬಂಧನಕ್ಕೆ ಕೇಂದ್ರ ವಿಭಾಗದ ಡಿಸಿಪಿಗಳಿಗೆ ಸೂಚಿಸಿದ್ದೇನೆ. ಹೆಚ್ಚಿನ ಮಾಹಿತಿಗಾಗಿ ಪೊಲೀಸರು ತಮ್ಮನ್ನು ಸಂಪರ್ಕಿಸಲಿದ್ದಾರೆ ಎಂದು ಉತ್ತರಿಸಿದ್ದಾರೆ.