ಅನೈತಿಕ ಸಂಬಂಧದ ಶಂಕೆ: ಗ್ರಾಪಂ ಮಾಜಿ ಅಧ್ಯಕ್ಷ, ಮಹಿಳೆಯ ಜೋಡಿ ಕೊಲೆ ಆರೋಪಿ ಪತಿ ಅರೆಸ್ಟ್

ಆನೇಕಲ್: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಸೂರ್ಯನಗರ ಸಿಟಿಯ ರಾಮಯ್ಯ ಬಡಾವಣೆಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಓರ್ವ ನನ್ನು ಬಂಧಿಸಿದ್ದಾರೆ.

ಪ್ರಕರಣದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷನನ್ನು ಸೇರಿದಂತೆ ಮಹಿಳೆಯೊಬ್ಬರ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಮಹಿಳೆಯ ಪತಿಯನ್ನು ಕಂಬಿ ಹಿಂದೆ ಕಳುಹಿಸಿದ್ದಾರೆ. ಚಿಕ್ಕಹಾಗಡೆ ನಿವಾಸಿ ಮುತ್ತುರಾಜ ಬಂಧಿತ ಆರೋಪಿ. 

 ಆನೇಕಲ್ ತಾಲೂಕಿನ ಸೂರ್ಯನಗರ ಸಿಟಿಯ ರಾಮಯ್ಯ ಬಡಾವಣೆಯಲ್ಲಿ ಡಿ.11ರಂದು ಈ ಜೋಡಿ ಕೊಲೆ ನಡೆದಿತ್ತು. ಬ್ಯಾಗಡದೇನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ನಾರಾಯಣಸ್ವಾಮಿ ಹಾಗೂ ಕಾವ್ಯಾ ಮೃತದೇಹವು ಬರ್ಬರವಾಗಿ ಹತ್ಯೆಗೊಂಡು ಮೃತದೇಹವಾಗಿ ಪತ್ತೆಯಾಗಿತ್ತು. ಇವರಿಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಸೂರ್ಯನಗರ ಪೊಲೀಸರು ತನಿಖೆ ಕೈಗೊಂಡಿದ್ದರು. ಕೊಲೆ ನಡೆದು ಎರಡೇ ದಿನಕ್ಕೆ ಪ್ರಕರಣವನ್ನು ಬೇಧಿಸಿ ಆರೋಪಿ ಮುತ್ತುರಾಜನನ್ನು ಬಂಧಿಸಿದ್ದಾರೆ. ಅನೈತಿಕ ಸಂಬಂಧದ ಶಂಕೆಯಿಂದ ಈ ಕೊಲೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ. 

ಆರೋಪಿಯ ಪತ್ತೆಗೆ ಎರಡು ತಂಡಗಳನ್ನು ರಚಿಸಲಾಗಿತ್ತು ಎಂದು ಬೆಂಗಳೂರು ಗ್ರಾಮಾಂತರ ಎಸ್​ಪಿ ಕೆ.ವಂಶಿಕೃಷ್ಣ ತಿಳಿಸಿದ್ದಾರೆ.