ಗಂಡು ಮಗುವಿಗೆ ಜನ್ಮ ನೀಡಿದ ಮೂರೇ ದಿನಕ್ಕೆ ಇಹಲೋಕ ತ್ಯಜಿಸಿದ ಬಾಣಂತಿ: ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಕುಟುಂಬಸ್ಥರ ಆರೋಪ

ದಾವಣಗೆರೆ: ಗಂಡು ಮಗುವೊಂದಕ್ಕೆ ಜನ್ಮ ನೀಡಿರುವ ಮೂರೇ ದಿನಕ್ಕೆ ತಾಯಿ ಮೃತಪಟ್ಟಿದ್ದು, ಶಸ್ತ್ರಚಿಕಿತ್ಸೆ ನಡೆಸಿರುವ ವೈದ್ಯರ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಮೃತಪಟ್ಟಾಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ. 

ದಾವಣಗೆರೆ ಜಿಲ್ಲಾಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ದಾಖಲಾಗಿದ್ದ ಅನುಷಾ ಸಂಜೀವ್ (23) ಎಂಬ ಬಾಣಂತಿ ಮೃತಪಟ್ಟವರು. 

ಅನುಷಾ ಸಂಜೀವ್ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಕಮದೋಡು ಗ್ರಾಮದ ನಿವಾಸಿಯಾಗಿದ್ದಾರೆ. ಇವರು ತಮ್ಮ ಚೊಚ್ಚಲ ಹೆರಿಗೆಗಾಗಿ ಶನಿವಾರ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಅನುಷಾ ಅವರಿಗೆ ಸಂಜೀವ್ ಎಂಬವರ ಜತೆ ಒಂದೂವರೆ ವರ್ಷಗಳ ಹಿಂದೆ ವಿವಾಹವಾಗಿತ್ತು.

ಶನಿವಾರ ಶಸ್ತ್ರಚಿಕಿತ್ಸೆಯ ಮೂಲಕ ಅನುಷಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಅನುಷಾ ಸುಸ್ತಾಗುತ್ತಿದೆ ಎಂದಿದ್ದಾರೆ. ತಕ್ಷಣಕ್ಕೆ ಸಹಾಯ ಕೋರಿದ್ದರೂ ವೈದ್ಯರು ಸ್ಪಂದಿಸಲಿಲ್ಲ ಎಂದು ಅನುಷಾ ಸಂಬಂಧಿಕರು ಆರೋಪಿಸಿದ್ದಾರೆ. ಆದರೆ ಕೆಲವೇ ಕ್ಷಣಗಳಲ್ಲಿ ಅವರು ಮೃತಪಟ್ಟಿದ್ದಾರೆ.

ಈ ಬಗ್ಗೆ ಮೃತಪಟ್ಟವರ ಸಂಬಂಧಿಕರು ಪೊಲೀಸ್ ದೂರು ದಾಖಲಿಸಿದ್ದು, ದಾವಣಗೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.