-->

ರಾಗಿ ಮೂಟೆಯಲ್ಲಿ ಚಿನ್ನದೊಡವೆ ಬಚ್ಚಿಟ್ಟ ಪತ್ನಿ, ರಾಗಿ ಮೂಟೆ ಮಾರಾಟ ಮಾಡಿದ ಪತಿ: ಆಭರಣ ಮತ್ತೆ ಕೈಸೇರಿದ್ದು ಮಾತ್ರ ಯಾವ ಸಿನಿಮಾ ಕಥೆಗೂ ಕಡಿಮೆಯಿಲ್ಲ!

ರಾಗಿ ಮೂಟೆಯಲ್ಲಿ ಚಿನ್ನದೊಡವೆ ಬಚ್ಚಿಟ್ಟ ಪತ್ನಿ, ರಾಗಿ ಮೂಟೆ ಮಾರಾಟ ಮಾಡಿದ ಪತಿ: ಆಭರಣ ಮತ್ತೆ ಕೈಸೇರಿದ್ದು ಮಾತ್ರ ಯಾವ ಸಿನಿಮಾ ಕಥೆಗೂ ಕಡಿಮೆಯಿಲ್ಲ!

ಮಂಡ್ಯ: ಹಿಂದೆ‌ ಕಳ್ಳಕಾಕರಿಗೆ ಹೆದರಿ ಜನರು ಆಭರಣಗಳನ್ನು ಭೂಮಿಯಡಿಯಲ್ಲಿ ಬಚ್ಚಿಡುತ್ತಿದ್ದರು. ಆಧುನಿಕ ಕಾಲಘಟ್ಟದಲ್ಲಿ ನಗ-ನಗದು ಅಮೂಲ್ಯ ವಸ್ತುಗಳು ಸೇಫಾಗಿರಲೆಂದು ಭದ್ರವಾದ ಕಪಾಟು ಅಥವಾ ಬ್ಯಾಂಕುಗಳ ಲಾಕರ್ ಮೊರೆ ಹೋಗ್ತಿದ್ದಾರೆ‌. ಆದರೆ ಇಲ್ಲೊಬ್ಬ ವೃದ್ಧೆ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ರಾಗಿ ಮೂಟೆಯಲ್ಲಿ ಅವಿತಿಟ್ಟಿದ್ದರು. ಆದರೆ ಈ ರಾಗಿ ಮೂಟೆಯಲ್ಲಿ ಬಚ್ಚಿಟ್ಟಿದ್ದ ಚಿನ್ನದೊಡವೆಗಳು ಊರೂರು ಸುತ್ತಿ 15 ದಿನಗಳ ಬಳಿಕ ಮತ್ತೆ ವೃದ್ಧೆಯ ಕೈ ಸೇರಿದೆ. 

ವಿಪರ್ಯಾಸವೆಂದರೆ ಪತ್ನಿ ಚಿನ್ನದೊಡವೆಗಳನ್ನು ರಾಗಿ ಮೂಟೆಯೊಳಗೆ ಬಚ್ಚಿಟ್ಟಿದ್ದು ಪತಿಗೆ ತಿಳಿದಿರಲಿಲ್ಲ. ಆತ ಅದರ ಅರಿವಿಲ್ಲದೆ ರಾಗಿ ಮೂಟೆಯನ್ನು ಮಾರಿದ್ದಾನೆ. ಇತ್ತ ತಾನು ಚಿನ್ನ ಬಚ್ಚಿಟ್ಟಿದ್ದ ರಾಗಿಮೂಟೆಯನ್ನು ಪತಿ ಮಾರಿದ್ದಾನೆ ಎಂಬುದು ಪತ್ನಿಗೆ ತಿಳಿದಿರಲಿಲ್ಲ. ಒಟ್ಟಿನಲ್ಲಿ ‌ಏನೋ ಆಗಿ ಮತ್ತೆ ಈ ರಾಗಿ ಮೂಟೆ ವೃದ್ಧ ಮಹಿಳೆಯ ಕೈಸೇರಿರುವ ಸಖತ್ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ...

ಇಂತಹದ್ದೊಂದು ವಿಚಿತ್ರ ಘಟನೆ ನಡೆದಿರೋದು ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ. ಇಲ್ಲಿನ ಕಲ್ಲಿನಾಥಪುರ ಗ್ರಾಮದ ವೃದ್ಧೆ ಲಕ್ಷ್ಮಮ್ಮ ಕಳೆದ 15 ದಿನಗಳ ಹಿಂದೆ ಕಳ್ಳಕಾಕರಿಗೆ ಹೆದರಿ  ಸುಮಾರು ನಾಲ್ಕು ಲಕ್ಷ ರೂ. ಮೌಲ್ಯದ ಚಿನ್ನದೊಡವೆಗಳನ್ನು ಒಂದು ಪರ್ಸ್ ನಲ್ಲಿಟ್ಟು ತಮ್ಮ ಮನೆಯಲ್ಲಿದ್ದ ರಾಗಿ ಮೂಟೆಯಲ್ಲಿ ಬಚ್ಚಿಟ್ಟಿದ್ದರು. ಬಳಿಕ ಆಕೆ ಬೆಂಗಳೂರಿನಲ್ಲಿರುವ ತಮ್ಮ ಮಗಳ ಮನೆಗೆ ಹೋಗಿದ್ದರು. ಇತ್ತ ಲಕ್ಷ್ಮಮ್ಮನವರ ಪತಿ ಕಲ್ಲೇಗೌಡರು ಮನೆಯ ಬಳಿ ಬಂದಿದ್ದ ಮೂವರು ಯುವಕರಿಗೆ ರಾಗಿ ಮೂಟೆಯನ್ನು ಮಾರಾಟ ಮಾಡಿದ್ದಾರೆ‌.

ಈ ಮೂವರು ಯುವಕರು ಊರುರು ಸುತ್ತಿ ಬಸರಾಳಿನ ಶ್ರೀನಿವಾಸ ಸೂರಿ ಬಿನ್ನಿ ರೈಸ್ ಮಿಲ್ ಗೆ ಈ ರಾಗಿ ಮೂಟೆಯನ್ನು ಮಾರಾಟ ಮಾಡಿದ್ದಾರೆ. ಕೆಲ ದಿನಗಳ ಬಳಿಕ ರೈಸ್ ಮಿಲ್ ಮಾಲಕರು ಮೂಟೆಯಲ್ಲಿದ್ದ ರಾಗಿಯನ್ನು ರಾಶಿಗೆ ಸುರಿದಿದ್ದಾರೆ‌. ಆಗ ಮೂಟೆಯಿಂದ ಆಭರಣಗಳಿದ್ದ ಪರ್ಸ್ ಕಂಡು ಬಂದಿದೆ. ತಕ್ಷಣ ಪರ್ಸ್ ಅನ್ನು ಪರಿಶೀಲನೆ ನಡೆಸಿದ ರೈಸ್ ಮಿಲ್ ಮಾಲಕ ತಿಮ್ಮೇಗೌಡರು ಅದರಲ್ಲಿ  ಆಭರಣಗಳು ಪತ್ತೆಯಾಗಿವೆ‌. ಜೊತೆಗೆ ಜ್ಯುವೆಲರಿ ಅಂಗಡಿಯ ರಶೀದಿಯೂ ಪತ್ತೆಯಾಗಿದೆ.

ಈ ರಶೀದಿಯನ್ನು ಕೊಂಡೊಯ್ದ ತಿಮ್ಮೆಗೌಡರು ನಾಗಮಂಗಲದ ಅದೇ ಚಿನ್ನದಂಗಡಿಗೆ ತೆರಳಿ ವಿಚಾರಣೆ ನಡೆಸಿದ್ದಾರೆ. ಆಗ ಈ ಆಭರಣಗಳು ಕಲ್ಲಿನಾಥಪುರ ಗ್ರಾಮದ ಕಲ್ಲೇಗೌಡರಿಗೆ ಸೇರಿದ ಆಭರಣ ಎಂಬುದು ತಿಳಿದು ಬಂದಿದೆ. ಇತ್ತ 15 ದಿನಗಳ ಬಳಿಕ ಗ್ರಾಮಕ್ಕೆ ಮರಳಿದ ಲಕ್ಷ್ಮಮ್ಮನವರಿಗೆ ತಾವು ಚಿನ್ನ ಬಚ್ಚಿಟ್ಟಿದ್ದ ರಾಗಿ ಮೂಟೆ ಮಾರಾಟವಾಗಿರೋದು ಮಾತ್ರ ಗೊತ್ತೇ ಆಗಿರಲಿಲ್ಲ. ಅತ್ತ ರೈಸ್ ಮಿಲ್ ಮಾಲಕ ತಿಮ್ಮೇಗೌಡರು ಆಭರಣಗಳನ್ನು ವಾಪಸ್ ಮಾಡಬೇಕೆಂಬ ಉದ್ದೇಶದಿಂದ ಕಲ್ಲಿನಾಥಪುರದ ಕಲ್ಲೆಗೌಡರನ್ನ ಸಂಪರ್ಕ ಮಾಡಿದ್ದಾರೆ. 

ಆ ವೇಳೆಗೆ ಅವರಿಗೆ ಲಕ್ಷ್ಮಮ್ಮ ರಾಗಿ ಮೂಟೆ ಪರಿಶೀಲಿಸಿದಾಗ ಅದು ಮಾರಾಟವಾಗಿರೋದು ತಿಳಿದು ಬಂದಿದೆ‌. ಇತ್ತ ರೈಸ್ ಮಿಲ್ ಮಾಲಕ ತಿಮ್ಮೇಗೌಡ ಗುರುತಿನ ಚೀಟಿ ಜೊತೆಗೆ ತಂದು ಆಭರಣಗಳನ್ನು ಪಡೆದುಕೊಳ್ಳುವಂತೆ ತಿಳಿಸಿದ್ದಾರೆ. ಅದರಂತೆ ಬಸರಾಳಿಗೆ ಆಗಮಿಸಿದ ಲಕ್ಷ್ಮಮ್ಮ ಹಾಗೂ ಆಕೆಯ ಪತಿ ಕಲ್ಲೇಗೌಡರು ಆಭರಣಗಳ ಬಗ್ಗೆ ತಿಮ್ಮೇಗೌಡರಿಗೆ ಸರಿಯಾದ ಮಾಹಿತಿ ನೀಡಿದ್ದಾರೆ. ಬಳಿಕ ಆಭರಣ ಅವರದ್ದೇ ಎಂದು ಖಚಿತವಾದ ಬಳಿಕ ಆಭರಣಗಳನ್ನು ಹಸ್ತಾಂತರಿಸಿದ್ದಾರೆ. ಆವರಣವನ್ನು ಪಡೆದ ಲಕ್ಷ್ಮಮ್ಮನವರು ತಿಮ್ಮೇಗೌಡರಿಗೆ ಅಭಿನಂದನೆ ತಿಳಿಸಿದ್ದಾರೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article