'ಚೆಲುವ'ನ ಮಾತಿಗೆ ಮರುಳಾಗಿ ಲಕ್ಷಾಂತರ ರೂ. ಕಳೆದುಕೊಂಡು ಪೆಚ್ಚಾದ ಯುವತಿ!

ರಾಯ್‌ಬರೇಲಿ (ಉತ್ತರ ಪ್ರದೇಶ): ಸೈಬರ್‌ ವಂಚನೆಯ ಬಹುದೊಡ್ಡ ಜಾಲವೇ ಇದ್ದು, ದಿನನಿತ್ಯವೂ ಈ ಬಗ್ಗೆ ಹಲವಾರು ವರದಿಗಳು ಪ್ರಕಟವಾಗುತ್ತಿದ್ದರೂ, ಜನರು ಮಾತ್ರ ಇನ್ನೂ ಎಚ್ಚೆತ್ತುಕೊಂಡಂತೆ ಇಲ್ಲ. ಏನೇನೋ‌ ಆಮಿಷ, ಸೌಂದರ್ಯಕ್ಕೆ ಮರುಳಾಗಿ ಲಕ್ಷಾಂತರ, ಕೋಟ್ಯಂತರ ರೂ.ಗಳನ್ನು ಕಳೆದುಕೊಂಡವವರು ಬಹಳಷ್ಟು ಮಂದಿ ಇದ್ದಾರೆ.  ಅಂತಹದ್ದೇ ಮತ್ತೊಂದು ಪ್ರಕರಣ   ಉತ್ತರಪ್ರದೇಶದ ರಾಯ್‌ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

ಚೆಲುವನೊಬ್ಬನ ಚೆಲುವಿಗೆ ಮರುಳಾದ ಯುವತಿಯು ಆತ ಹೇಳಿದಂತೆ 32 ಲಕ್ಷ ರೂ. ಕಳೆದುಕೊಂಡಿದ್ದಾಳೆ. ಈ ಯುವತಿಗೆ ಇನ್‍ಸ್ಟಾಗ್ರಾಂನಲ್ಲಿ ಕಳೆದ ತಿಂಗಳು ಯುವಕನೋರ್ವನು ಪರಿಯಚಯನಾಗಿದ್ದಾನೆ. ಈತ ತಾನು ಲಂಡನ್‌ ಎಂದು ಪರಿಚಯಿಸಿದ್ದಾನೆ.

ವಿದೇಶಿಗ, ಅದರಲ್ಲಿಯೂ ಆತನ ಚೆಲುವಿಗೆ ಮರುಳಾಗಿರುವ ಯುವತಿ ವಿದೇಶಕ್ಕೆ ಹಾರುವ ಕನಸು ಕಂಡಿದ್ದಾಳೆ. ಈ ನಡುವೆಯೇ ಯುವಕನಿಗೆ ಯುವತಿ ಸಾಕಷ್ಟು ಸ್ಥಿತಿವಂತಳು ಎಂಬುದು ಆಕೆಯಿಂದಲೇ ತಿಳಿದು ಬಂದಿದೆ. ಆದ್ದರಿಂದ ಆ ‘ಚೆಲುವ’! ಯುವತಿಯ ಅಂದಚೆಂದವನ್ನೆಲ್ಲಾ ಬಣ್ಣಿಸಿದ್ದಾನೆ. ಆತನ ಹೊಗಳಿಕೆಗೆ ಮರುಳಾದ ಯುವತಿ ಉಬ್ಬಿಹೋಗಿದ್ದಾಳೆ.

ಆತ ಆಕೆಗೆ 'ತಾನು ನಿನಗೊಂದು ಉಡುಗೊರೆ ಕೊಡುವ ಆಸೆಯಿದೆ, ಕಳಿಸಳೇ ಎಂದಿದ್ದಾನೆ. ಅನಾಯಾಸವಾಗಿ ಲಂಡನ್‌ನಿಂದ ಗಿಫ್ಟ್‌ ಬರುವ ವಿಚಾರ ತಿಳಿದು ಸಂತೋಷದಲ್ಲಿ ತೇಲಾಡಿದ್ದಾಳೆ. ಯುವತಿ ಹೂಂ ಎಂದಿದ್ದೇ ತಡ, ಯುವಕ ತಾನು ಕಳುಹಿಸುತ್ತಿರುವ ಉಡುಗೊರೆ ಸುಮಾರು 45 ಲಕ್ಷ ರೂ.ನದ್ದಾಗಿದ್ದು, ಕನಿಷ್ಠ 32 ಲಕ್ಷ ರೂ. ಟ್ಯಾಕ್ಸ್ ಕಟ್ಟಬೇಕು. ಅದನ್ನು ಭಾರತದಿಂದ ಕಟ್ಟಿದ್ದಲ್ಲಿ ತನಗೆ ಉಡುಗೊರೆ ಕಳುಹಿಸಲು ಸುಲಭವಾಗುತ್ತದೆ ಎಂದು ಹೇಳಿದ್ದಾನೆ.

ಈ ಬಗ್ಗೆ ಪೂರ್ವಾಪರ ಆಲೋಚನೆ ಮಾಡದೆ ಯುವತಿ ಆತ ಹೇಳಿದ್ದಷ್ಟು ನಗದು ಕಳುಹಿಸಿದ್ದಾಳೆ. ನಗದು ದೊರಕಿದ್ದೇ ತಡ ಯುವಕ ನಾಪತ್ತೆಯಾಗಿದ್ದಾನೆ‌. ಇತ್ತ ಉಡುಗೊರೆಯೂ ಇಲ್ಲ, ದುಡ್ಡೂ ಹೋಯಿತು. ಅಲ್ಲದೆ ಆತನ ಇನ್‌ಸ್ಟಾಗ್ರಾಂ ಕೂಡಾ ಸ್ಥಗಿತವಾಗಿತ್ತು. ಆಗ ಯುವತಿಗೆ ತಾನು ಮೋಸ ಹೋಗಿದ್ದು ಅರಿವಿಗೆ ಬಂದಿದೆ.

ಇದೀಗ ಯುವತಿ ತನಗೆ ನ್ಯಾಯ ಕೊಡಿಸಬೇಕೆಂದು ಸೈಬರ್ ಠಾಣೆಯ ಮೆಟ್ಟಿಲೇರಿದ್ದಾಳೆ. ಸದ್ಯ ಸೈಬರ್‌ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.