“ರಾಹುಲ್ ಗಾಂಧಿ ಡ್ರಗ್ಸ್ ಪೆಡ್ಲರ್” ನಳಿನ್ ಹೇಳಿಕೆಗೆ ಬಿ.ಎಸ್.ವೈ. ಅಸಮ್ಮತಿ
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬಗ್ಗೆ ನಳಿನ್ ಕುಮಾರ್ ಕಟೀಲ್ ನೀಡಿರುವ ಹೇಳಿಕೆಗೆ ಸ್ವಪಕ್ಷೀಯರೇ ಅಪಸ್ವರ ಎತ್ತಿದ್ದಾರೆ.
ಇಂತಹ ಹೇಳಿಕೆ ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದು, ಈ ರೀತಿ ಅಗೌರವಯುತವಾಗಿ ಯಾರೂ ಮಾತನಾಡಬಾರದು ಎಂದು ಹೇಳಿದರು.
ಸಂಸದ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಡ್ರಗ್ಸ್ ಪೆಡ್ಲರ್ ಎಂದು ನಳಿನ್ ಕುಮಾರ್ ಕಟೀಲ್ ನೀಡಿರುವ ಹೇಳಿಕೆ ಸಂಬಂಧ ಸಿಂದಗಿ ತಾಲೂಕಿನ ಮೊರಟಗಿಯಲ್ಲಿ ಮಾತನಾಡಿದ ಅವರು, ಯಾರೂ ಯಾರ ಬಗ್ಗೆಯೂ ಈ ರೀತಿ ಅಗೌರವದಿಂದ ಮಾತನಾಡಬಾರದು. ರಾಹುಲ್ ಗಾಂಧಿ ಅವರ ಬಗ್ಗೆ ಗೌರವವಿದೆ ಎಂದು ಯಡಿಯೂರಪ್ಪ ಹೇಳಿದರು.
ಎಚ್. ಡಿ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಆರೆಸ್ಸೆಸ್ ವಿರುದ್ಧದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆರೆಸ್ಸೆಸ್ ನ್ನು ಎಳೆದು ತರುತ್ತಿದ್ದಾರೆ. ಇದರಿಂದ ಅವರಿಗೆ ಯಾವುದೇ ಲಾಭವಿಲ್ಲ. ಅವರಿಗೆ ಉಪ ಚುನಾವಣೆಯಲ್ಲಿ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.