ಉಳ್ಳಾಲ: ನಗರದ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿರುವ ಕುಮೇರು ಪಾಡಾಂಗರ ಪೂಮಾಲೆ ಭಗವತೀ ಕ್ಷೇತ್ರಕ್ಕೆ ನುಗ್ಗಿರುವ ಕಳ್ಳರು ಅಣ್ಣಪ್ಪ ದೈವದ ಪಂಚಲೋಹದ ಮೊಗವನ್ನೇ ಕಳವುಗೈದಿದ್ದಾರೆ.
ಮಾಸ್ತಿಕಟ್ಟೆಯಲ್ಲಿರುವ ತೀಯ ಸಮಾಜದ ಕುಟುಂಬಸ್ಥರ ಆರಾಧ್ಯ ದೈವ ಕುಮೇರು ಪಾಡಾಂಗರ ಪೂಮಾಲೆ ಭಗವತಿ ಕ್ಷೇತ್ರದ ಅಣ್ಣಪ್ಪ ದೈವದ ಗುಡಿಯ ಬಾಗಿಲನ್ನು ಕಳ್ಳರು ಒಡೆದಿದ್ದಾರೆ. ಬಳಿಕ ಅಲ್ಲಿದ್ದ ಅಣ್ಣಪ್ಪ ದೈವದ ಪಂಚಲೋಹದ ಮೊಗವನ್ನು ಕಳವು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಕ್ಷೇತ್ರಕ್ಕೆ ಮೊಗವನ್ನು ಹರಕೆ ರೂಪದಲ್ಲಿ ಒಪ್ಪಿಸಿರುವ ಸ್ಥಳೀಯ ನಿವಾಸಿ ನವೀನ್ ಡಿ ಕುಟ್ಟಪ್ಪ ಎಂಬವರು ಬೆಳಗ್ಗೆ ವಾಕಿಂಗ್ ಹೋಗುವ ಸಂದರ್ಭ ಅಣ್ಣಪ್ಪನ ಗುಡಿಯ ಬಾಗಿಲು ತೆರೆದಿರುವುದನ್ನು ನೋಡಿದ್ದಾರೆ. ಅನುಮಾನಗೊಂಡ ಅವರು ತಕ್ಷಣ ದೈವಸ್ಥಾನದ ಮುಖ್ಯ ಅರ್ಚಕ ಭುಜಂಗ ಎಂಬವರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ದೇವಸ್ಥಾನಕ್ಕೆ ಧಾವಿಸಿದ ಅರ್ಚಕ ಭುಜಂಗ ಅವರು 1 ಲಕ್ಷ ರೂ. ಬೆಳೆ ಬಾಳುವ ಪಂಚ ಲೋಹದ ಅಣ್ಣಪ್ಪ ದೈವದ ಮೊಗ ಕಳವಾಗಿರುವುದು ಖಚಿತಪಡಿಸಿಕೊಂಡು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿರುವ ಪೊಲೀಸರು ದೈವಸ್ಥಾನದ ಹತ್ತಿರದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಕಳ್ಳರು ಅಣ್ಣಪ್ಪ ದೈವದ ಗುಡಿಯ ಬೀಗ ಒಡೆದ ಪಂಚ ಲೋಹದ ಮೊಗವನ್ನು ಮಾತ್ರ ಎಗರಿಸಿ ಅಲ್ಲಿದ್ದ ಪ್ರಭಾವಳಿ, ಬೆಳ್ಳಿ ಮತ್ತು ಲೋಹದ ಕಡ್ಸಲೆ ಇತರ ದೈವೀ ಪರಿಕರಗಳನ್ನು ಹಾಗೇ ಬಿಟ್ಟು ಹೋಗಿದ್ದಾರೆ. ಅಲ್ಲಸೆ ದೈವಸ್ಥಾನದ ಪ್ರಾಂಗಣದಲ್ಲಿನ ಪಾಡಂಗರ ಭಗವತಿ ಗುಡಿಯ ಬಾಗಿಲ ಬೀಗವನ್ನೂ ಮುರಿಯಲು ವಿಫಲ ಯತ್ನ ಪಟ್ಟಿರುವುದು ಕಂಡುಬಂದಿದೆ.
ಕಾರಣೀಕ ಕ್ಷೇತ್ರ ಪೂಮಾಲೆ ಭಗವತಿ ಕ್ಷೇತ್ರದ ನಾಗನ ಗುಡಿಯ ನಾಗನ ಕಲ್ಲನ್ನು ಹಿಂದೆ ನಾಲ್ವರು ಅನ್ಯಮತೀಯರು ಸಮೀಪದ ಬಾವಿಗೆ ಎಸೆದಿದ್ದರು. ಪರಿಣಾಮ ನಾಲ್ವರಲ್ಲಿ ಓರ್ವ ಸಾವನ್ನಪ್ಪಿದ್ದು, ಇನ್ನುಳಿದವರು ಕಷ್ಟಕ್ಕೆ ತುತ್ತಾಗಿ ಕ್ಷೇತ್ರಕ್ಕೆ ತಪ್ಪು ಕಾಣಿಕೆ ಸಲ್ಲಿಸಲು ಮುಂದಾಗಿದ್ದರು. ಅಣ್ಣಪ್ಪ ದೈವವೂ ಕಾರಣಿಕ ದೈವವಾಗಿದ್ದು ಅತೀ ಶೀಘ್ರದಲ್ಲಿ ಕಳ್ಳ ಯಾರೆಂಬುದನ್ನು ಆತನೇ ಪತ್ತೆಹಚ್ಚಿಕೊಡುತ್ತಾನೆಂದು ದೈವಸ್ಥಾನದ ಅರ್ಚಕರು ಹೇಳಿದ್ದಾರೆ.