ಪ್ರೇತ ಬಿಡಿಸುವೆನಂದು ಅಪ್ರಾಪ್ತೆಯ ಅತ್ಯಾಚಾರ: ಮಂತ್ರವಾದಿ, ಬಾಲಕಿಯ ತಾಯಿ ಬಂಧನ

ಮುಂಬೈ: ಮಾವನ ಪ್ರೇತ ಬಾಧೆ ಇದೆಯೆಂದು ಹೇಳಿ 16 ವರ್ಷದ ಅಪ್ರಾಪ್ತೆಯನ್ನು ಕಾಡಿಗೆ ಕರೆದೊಯ್ದ 
ಮಂತ್ರವಾದಿಯೊಬ್ಬ ಅತ್ಯಾಚಾರ ನಡೆಸಿರುವ ಘಟನೆ ಥಾಣೆಯ ಭೀವಂಡಿ ಎಂಬಲ್ಲಿ ನಡೆದಿದೆ. ಮಂತ್ರವಾದಿಯ ಈ ಕೃತ್ಯಕ್ಕೆ ಹುಡುಗಿಯ ತಾಯಿಯೇ ಸಹಕರಿಸಿದ್ದಾಳೆಂಬ ಆರೋಪ ಕೇಳಿಬಂದಿದೆ. ಇದೀಗ ಮಂತ್ರವಾದಿ ಮತ್ತು ಬಾಲಕಿಯ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.  

ಕೃತ್ಯ ನಡೆದ ಬಳಿಕ ಅಲ್ಲಿಂದ ಪಾರಾದ ಬಾಲಕಿ, ನಾರ್ಪೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದೂರಿನಲ್ಲಿ‌ ಆಕೆ 'ತನಗೆ ತೀವ್ರವಾದ ಕತ್ತು ನೋವಿತ್ತು. ಈ ಹಿನ್ನೆಲೆಯಲ್ಲಿ ತಾಯಿಯ ಜೊತೆ ಮಂತ್ರವಾದಿ ಬಳಿ ತೆರಳಿದಾಗ, ಆತ ಮಾವನ ಪ್ರೇತ ಬಾಧೆಯಿದೆ' ಎಂದು ಹೇಳಿದ್ದಾನೆ. ಅಲ್ಲದೆ ಅದನ್ನು ನಿವಾರಣೆ ಮಾಡುತ್ತೇನೆಂದು ತಾಯಿ ಜೊತೆಗೆ ಕಾಡಿಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆಂದು ದೂರಿನಲ್ಲಿ ತಿಳಿಸಿದ್ದಾಳೆ. 

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ನಾರ್ಪೋಲಿ ಪೊಲೀಸ್ ಬಾಲಕಿಯ ತಾಯಿ ಮತ್ತು ಮಂತ್ರವಾದಿಯನ್ನು ವಶಕ್ಕೆ ಪಡೆದು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಜೊತೆಗೆ ಮಂತ್ರವಾದಿಯ ಮೇಲೆ ಮಾನವ ಬಲಿ, ಮಾಟಗಾರಿಕೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. 
BREAKING NEWS
Loading latest news...
Join our WhatsApp Channel Powered By : Online Pudu