ಮಂಗಳೂರು ನಗರದಿಂದ ವಿಮಾನ ನಿಲ್ದಾಣ ಸಂಪರ್ಕಿಸುವ ಮರವೂರು ಸೇತುವೆಯಲ್ಲಿ ಸಂಚಾರ ವ್ಯವಸ್ಥೆ ಮತ್ತೆ ಸ್ಥಾಪನೆಯಾಗಿದೆ.
ಸುಮಾರು ಒಂದೂವರೆ ತಿಂಗಳ ಹಿಂದೆ ಸೇತುವೆಯೊಂದರ ಆಧಾರಸ್ತಂಬ(ಪಿಲ್ಲರ್) ಕುಸಿದ ಪರಿಣಾಮ ಸೇತುವೆ ಜಗ್ಗಿ ಹೋಗಿ ಸಂಚಾರ ವ್ಯವಸ್ಥೆಯನ್ನು ನಿರ್ಬಂಧಿಸಲಾಗಿತ್ತು. ಇದೀಗ ಇದರ ಆಧಾರಸ್ತಂಬವನ್ನು ಮತ್ತೆ ಯಥಾಸ್ಥಿತಿಗೆ ತಂದು ಸೇತುವೆಯನ್ನು ಸದೃಢಗೊಳಿಸುವ ಕಾರ್ಯ ಯಶಸ್ವಿಯಾಗಿ ಮುಗಿದಿದೆ.
ಇದರಿಂದ ಸೇತುವೆಯಲ್ಲಿ ಮತ್ತೆ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಈಗಾಗಲೇ ಅತಿ ಹೆಚ್ಚು ಭಾರದ ವಾಹನ ಸಂಚಾರ ಮಾಡುವ ಪರೀಕ್ಷೆ ನಡೆಸಲಾಗಿದೆ. ಇದರ ವರದಿಗಳು ಮಧ್ಯಾಹ್ನದ ವೇಳೆ ಜಿಲ್ಲಾಡಳಿತದ ಕೈ ಸೇರಲಿದ್ದು, ಆ ಬಳಿಕ ಜಿಲ್ಲಾಧಿಕಾರಿ ಸೇತುವೆ ಮೇಲಿನ ಸಂಚಾರ ವ್ಯವಸ್ಥೆಗೆ ಹಸಿರು ನಿಶಾನೆ ನೀಡಿ ಆದೇಶ ಹೊರಡಿಸಲಿದ್ದಾರೆ.
ಭಾರತೀಯ ರಸ್ತೆ ಮಹಾಸಂಘದ ಮಾನದಂಡದ ಆಧಾರದಲ್ಲಿ ರಸ್ತೆಯ ಭಾರ ಸಹನಾ ಪರೀಕ್ಷೆಯನ್ನು ಮಾಡಲಾಗಿದೆ. ಯಾವುದೇ ರೀತಿಯ ಭಾರದ ನಿರ್ಬಂಧ ವಿಧಿಸದೆ, ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ಸೇತುವೆಯನ್ನು ಬಳಸಲು ಅದು ಸಮರ್ಥವಾಗಿದೆ ಎಂದು ತಂತ್ರಜ್ಞರು ಹೇಳಿದ್ದಾರೆ.
