ಬೆಂಗಳೂರು: ಕಾಂಗ್ರೆಸ್ ಮತ್ತುಅದರ ನಾಯಕರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಫೇಸ್‌ಬುಕ್ ಪೋಸ್ಟ್ ಮಾಡಿದ್ದ ಪ್ರಖಂಡ ಮಾತುಗಾರ ಮಿಥುನ್ ಚಕ್ರವರ್ತಿ ಆಲಿಯಾಸ್ ಚಕ್ರವರ್ತಿ ಸೂಲಿಬೆಲೆ ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಅವರ ವಿರುದ್ಧ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸೂಲಿಬೆಲೆ ವಿರುದ್ಧ ಕಾಂಗ್ರೆಸ್ ಮುಖಂಡ ತೇಜಸ್ ಕುಮಾರ್ ದೂರು ನೀಡಿದ್ದರೆ. ಕಾಂಗ್ರೆಸ್ ವಿರುದ್ಧ ಸೂಲಿಬೆಲೆ ಕಪೋಲಕಲ್ಪಿತ ಮತ್ತು ಆಧಾರ ರಹಿತ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಹನುಮಂತನಗರ ಬ್ಲಾಕ್ ಕಾಂಗ್ರೆಸ್ ಮುಖಂಡ ತೇಜಸ್ ಕುಮಾರ್ ನೀಡಿರುವ ದೂರಿನ ಪ್ರಕಾರ, ಜೂನ್ 7ರಂದು ಫೇಸ್ ಬುಕ್ ಪೋಸ್ಟ್ ಹಾಕಿದ್ದ ಚಕ್ರವರ್ತಿ ಸೂಲಿಬೆಲೆ ತಮ್ಮ ಎಫ್‌ಬಿ ಗೋಡೆಯಲ್ಲಿ, ಜನರಿಗೆ ಆಕ್ಸಿಜನ್ ಸಿಗದಂತೆ ಕಾಂಗ್ರೆಸ್ ಅಕ್ರಮ ದಾಸ್ತಾನು ಮಾಡಿತ್ತು, ಆಸ್ಪತ್ರೆಗಳಲ್ಲಿ ಬೆಡ್ ಬ್ಲಾಕ್ ಮಾಡಿ ಜನ ಸಾಯುವಂತೆ ಮಾಡಿತ್ತು. ಅಮಾಯಕರ ಸಾವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈಭವೀಕರಿಸಿ ಭಾರತದ ಮಾನ ಹರಾಜು ಹಾಕಿತ್ತು ಎಂದು ಹೇಳಿಕೊಂಡಿದ್ದರು ಎಂದು ಆರೋಪಿಸಲಾಗಿದೆ.
ಈ ರೀತಿಯ ಸುಳ್ಳು ಸಂದೇಶವನ್ನು ಫೇಸ್ ಬುಕ್ ಗೋಡೆಯಲ್ಲಿ ಪೋಸ್ಟ್ ಮಾಡಿರುವ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಹನುಮಂತನಗರ ಬ್ಲಾಕ್ ಕಾಂಗ್ರೆಸ್ ಮುಖಂಡ ತೇಜಸ್ ಕುಮಾರ್ ದೂರು ನೀಡಿದ್ದಾರೆ.
