Marrige of Teenage - ವಯಸ್ಸಿಗೆ ಬಂದ ಮಗಳಿದ್ರೂ ಅಪ್ರಾಪ್ತೆಯನ್ನು ವರಿಸಲು ಹೋದ ವ್ಯಕ್ತಿಗೆ ಪೊಲೀಸರ ಕೈಕೋಳ!





ಹಾಸನ: ಪತ್ನಿ ತೀರಿಕೊಂಡ ಕೇವಲ ಒಂದು ವರ್ಷದೊಳಗೆ ವ್ಯಕ್ತಿಯೊಬ್ಬ ತನ್ನ ಚಪಲದ ದುರಾಸೆಯಿಂದ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಲು ಹೋಗಿ ಸಂಕಷ್ಟವನ್ನು ಮೈಮೇಲೆ ಎಳೆದುಕೊಂಡಿದ್ದಾನೆ. ಈತನನ್ನು ಪೊಲೀಸರು ಬಂಧಿಸಲಾಗಿದೆ.


ಬಂಧಿತ ವ್ಯಕ್ತಿಯನ್ನು ಅರಕಲಗೂಡು ತಾಲೂಕಿನ ಯೋಗೇಶ್ ಗೌಡ (47) ಎಂದು ಗುರುತಿಸಲಾಗಿದೆ. ಈ ಘಟನೆ ನಡೆದಿರುವುದು ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನಲ್ಲಿ.


ಆರೋಪಿ ಯೋಗೇಶ್ ಗೌಡ ದಾವಣಗೆರೆ ಮೂಲದ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಲು ಹೊರಟಿದ್ದ. ವರ್ಷದ ಹಿಂದಷ್ಟೇ ಈತನ ಪತ್ನಿ ಅಕಾಲಿಕ ಮರಣ ಹೊಂದಿದ್ದರು. ಒಂದು ವರ್ಷದೊಳಗೆ ತನ್ನ ಮನೆಯಲ್ಲಿ ಶುಭಕಾರ್ಯ ನಡೆಯಬೇಕೆಂಬ ಸಂಪ್ರದಾಯದ ಹಿನ್ನೆಲೆಯಲ್ಲಿ ಈತ ಈಗ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಲು ಮುಂದಾಗಿದ್ದಾನೆ.


ಅಪ್ರಾಪ್ತ ಬಾಲಕಿಯನ್ನು ಹಾಸನ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ರಕ್ಷಣೆ ಮಾಡಲಾಗಿದೆ.






ಘಟನೆ ಹಿನ್ನೆಲೆ:

ದಾವಣಗೆರೆ ಮೂಲದ ಅಪ್ರಾಪ್ತ ಬಾಲಕಿಯನ್ನು ಸರ್ಕಾರಿ ಕೆಲಸ ಕೊಡಿಸುವ ಆಮಿಷವನ್ನೊಡ್ಡಿ ಈತ ಹಾಸನಕ್ಕೆ ಕರೆತಂದಿದ್ದ. ಬಳಿಕ ಹಾಸನ ಜಿಲ್ಲೆಯ ಆಲೂರು ತಾಲೂಕಿನ ದೇವಾಲಯವೊಂದರಲ್ಲಿ ಮದುವೆಯಾಗಲು ಮುಂದಾಗಿದ್ದ.


ಯೋಗೇಶ್ ಗೌಡಗೆ ಈಗಾಗಲೇ ಮದುವೆಗೆ ಬಂದಿರುವ ಮಗಳಿದ್ದಾಳೆ. ಮಗಳ ಮದುವೆ ಕೂಡಾ ಜುಲೈ ತಿಂಗಳಲ್ಲಿ ನಿಶ್ಚಯವಾಗಿತ್ತು. ಮಗಳ ಮದುವೆಗೂ ಮುನ್ನ ಈತ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿ ಮನೆ ತುಂಬಿಸಿಕೊಳ್ಳುವ ಯೋಚನೆ ಮಾಡಿದ್ದ. ಅಷ್ಟರಲ್ಲಿ ವಿಚಾರ ತಿಳಿದ ಅಧಿಕಾರಿಗಳು ದೇವಾಲಯಕ್ಕೆ ದಾಳಿ ನಡೆಸಿ ಅಪ್ರಾಪ್ತ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ.


ರೋಪಿ ಯೋಗೇಶ್ ಗೌಡನ ವಿರುದ್ಧ ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu