ಆಘಾತಕಾರಿ ಬೆಳವಣಿಗೆಯೊಂದರಲ್ಲಿ ರಾಮಜನ್ಮಭೂಮಿ ದೇವಾಲಯ ನಿರ್ಮಾಣದ ಭೂ ಖರೀದಯಲ್ಲಿ ಭಾರೀ ದೊಡ್ಡ ಪ್ರಮಾಣದ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಸಮಾಜವಾದಿ ಪಕ್ಷ ಮತ್ತು ಆಮ್ ಆದ್ಮಿ ಪಕ್ಷದ ಸಂಸದರು ಈ ಬಗ್ಗೆ ಗಂಭೀರ ಆರೋಪ ಮಾಡಿದ್ದು, ಉತ್ತರ ಪ್ರದೇಶ ಚುನಾವಣೆಗೆ ಮುನ್ನ ಕೇಳಿಬಂದ ಆರೋಪ ರಾಜಕೀಯ ಪ್ರೇರಿತವಾಗಿದೆ ಎನ್ನಲಾಗಿದೆ.
2020ರ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಎಂಬ ಹೆಸರಿನಲ್ಲಿ ಟ್ರಸ್ಟ್ ಆರಂಭಿಸಿದ್ದರು. ಈ ಟ್ರಸ್ಟ್‌ಗೆ ರಾಮ ಜನ್ಮಭೂಮಿ ದೇವಾಲಯದ ನಿರ್ಮಾಣ ಮತ್ತು ಮೇಲ್ವಿಚಾರಣೆಯ ಹೊಣೆಯನ್ನು ನೀಡಲಾಗಿತ್ತು. ಸುಪ್ರೀಂ ಕೋರ್ಟ್‌ನ ಐತಿಹಾಸಿಕ ಹಾಗೂ ಮಹತ್ವದ ತೀರ್ಪು ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿತ್ತು.
ದೇವಾಲಯಕ್ಕೆ ಬೇಕಾಗಿರುವ ಹೆಚ್ಚುವರಿ ಜಮೀನನ್ನು ಸಂಬಂಧಪಟ್ಟ ವ್ಯಕ್ತಿಗಳಿಂದ ಒಟ್ಟು ಎರಡು ಕೋಟಿ ರೂ.ಗಳಿಗೆ ಖರೀದಿಸಲಾಗಿತ್ತು. ಅದನ್ನು ಒಂದೇ ನಿಮಿಷದ ಬಳಿಕ ಟ್ರಸ್ಟ್‌ಗೆ 18.5 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿತ್ತು.
ಸಮಾಜವಾದಿ ಪಕ್ಷದ ಶಾಸಕ ಹಾಗೂ ಮಾಜಿ ಸಚಿವ ಪವನ್ ಪಾಂಡೆ ಅವರು ಅಯೋಧ್ಯೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಗಂಭೀರ ಆರೋಪ ಮಾಡಿದ್ಧಾರೆ.
ಇದೇ ರೀತಿಯ ಆರೋಪವನ್ನು ಪ್ರತ್ಯೇಕ ಆಮ್ ಆದ್ಮಿ ಪಕ್ಷದ ರಾಜ್ಯ ಸಭಾ ಸದಸ್ಯ ಸಂಜಯ್ ಸಿಂಗ್ ಅವರು ಮಾಡಿದ್ದಾರೆ. ಪ್ರತ್ಯೇಕವಾಗಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಆರೋಪ ಮಾಡಿದ್ದಾರೆ.
ಆದರೆ, ಈ ಆರೋಪಗಳನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮತ್ತು ವಿಶ್ವ ಹಿಂದೂ ಪರಿಷತ್ ಸ್ಪಷ್ಟವಾಗಿ ಅಲ್ಲಗಳೆದಿದೆ ಮತ್ತು ಈ ಬಗ್ಗೆ ಪ್ರತಿಕ್ರಿಯೆ ಮಾಡುವಷ್ಟು ಆರೋಪಗಳು ಯೋಗ್ಯವಾಗಿಲ್ಲ ಎಂದು ಹೇಳಿವೆ.
