ಬಿಜೆಪಿ ತೊರೆದು ಮತ್ತೆ ಟಿಎಂಸಿ ಸೇರುವ ಇಚ್ಛೆಯನ್ನು ಟಿಎಂಸಿಯ ಮಾಜಿ ಶಾಸಕಿ ಸೋನಾಲಿ ಗುಹ ವ್ಯಕ್ತಪಡಿಸಿರುವ ಬೆನ್ನಲ್ಲೇ ಮತ್ತೋರ್ವ ನಾಯಕಿ ಸರಳಾ ಮುರ್ಮು ಟಿಎಂಸಿಗೆ ಮರು ಸೇರ್ಪಡೆ ಕೋರಿ ಮನವಿ ಅರ್ಜಿಯನ್ನು ಸಲ್ಲಿಸಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಲ್ಲಿ ಕ್ಷಮೆ ಕೋರಿ, ಪಕ್ಷಕ್ಕೆ ವಾಪಸ್ ಕರೆಸಿಕೊಳ್ಳುವಂತೆ ನಿನ್ನೆ ಟಿಎಂಸಿಯಿಂದ ನಾಲ್ಕು ಬಾರಿ ಶಾಸಕಿಯಾಗಿದ್ದ ಸೋನಾಲಿ ಗುಹ ಮಮತಾ ಬ್ಯಾನರ್ಜಿಗೆ ಮನವಿ ಮಾಡಿದ್ದರು.
ದೀದಿ. ನನ್ನನ್ನು ಕ್ಷಮಿಸಿ ಬಿಡಿ, ನೀವು ಇಲ್ಲದಿದ್ದರೆ ನಾನು ಬದುಕಲಾರೆ. ದಯವಿಟ್ಟು ನನಗೆ ವಾಪಸ್ ಬರಲು ಅವಕಾಶ ಕೊಡಿ ಎಂದು ಗುಹಾ ಮನವಿಯನ್ನು ಮಾಡಿದ್ದರು.
ಇದರ ಬೆನ್ನಲ್ಲೇ ಮತ್ತೊಬ್ಬ ಪಕ್ಷ ತೊರೆದಿದ್ದ ನಾಯಕಿ ಮುರ್ಮು, ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಕ್ಷಮೆ ಕೇಳಿದ್ದಾರೆ. ಅವರು ನನ್ನನ್ನು ಒಪ್ಪಿಕೊಂಡರೆ, ನಾನು ಅವರೊಂದಿಗೆ ಇರುತ್ತೇನೆ ಮತ್ತು ಪಕ್ಷಕ್ಕಾಗಿ ಶ್ರದ್ಧೆಯಿಂದ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇವರು ಟಿಕೆಟ್ ಹಂಚಿಕೆಯಲ್ಲಿನ ಮನಸ್ತಾಪದಿಂದಾಗಿ ಟಿಎಂಸಿ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಇದೀಗ ಅಲ್ಲಿನ ವಾತಾವರಣ ಸರಿಯಿಲ್ಲ ಎಂದು ಟಿಎಂಸಿ ಕಡೆ ಮುಖಮಾಡುತ್ತಿದ್ದಾರೆ.
