ಪ್ರೀತಿಸುತ್ತಿದ್ದ ಯುವತಿ ತನ್ನನ್ನು ತೊರೆದು ಇನ್ನೊಬ್ಬನ ಜೊತೆ ಸುತ್ತಾಡುತ್ತಿರುವುದರಿಂದ ಹತಾಶೆಗೊಂಡ ಯುವಕ ಹೊಟೇಲ್‌ಗೆ ನುಗ್ಗಿ ಮಾಜಿ ಪ್ರೇಯಸಿ ಮತ್ತು ಆಕೆಯ ಪ್ರಿಯಕರನಿಗೆ ಹಲ್ಲೆ ನಡೆಸಿ ಪುಂಡಾಟ ನಡೆಸಿದ ಘಟನೆ ಮಂಗಳೂರಿನಲ್ಲಿ ವರದಿಯಾಗಿದೆ.
ಈ ಘಟನೆ ಜನವರಿ 30ರಂದು ಮಂಗಳೂರು ನಗರದ ರೆಸ್ಟೋರೆಂಟಿನಲ್ಲಿ ನಡೆದಿದ್ದು, ಸಿಸಿಟಿವಿ ದೃಶ್ಯವಾಳಿ ಇದೀಗ ವೈರಲ್ ಆಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹತಾಶೆಗೊಂಡ ಮಾಜಿ ಪ್ರಿಯಕರ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರು ಅಪರಾಧಿಕ ಹಿನ್ನೆಲೆ ಉಳ್ಳವರಾಗಿದ್ದಾರೆ.
ಆರೋಪಿಗಳನ್ನು ಬೋಳೂರಿನ ತ್ರಿಶೂಲ್ ಸಾಲಿಯಾನ್(21), ಕೋಡಿಕಲ್ ನಿವಾಸಿ ಸಂತೋಷ್ ಪೂಜಾರಿ(19) ಮತ್ತು ಅಶೋಕನಗರದ ನಿವಾಸಿ ಡ್ಯಾನೇಶ್(18) ಎಂದು ಗುರುತಿಸಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಪ್ರೀತಿ ನಿರಾಕರಣೆಯಿಂದ ಹತಾಶೆಗೊಂಡ ಯುವಕ ತನ್ನ ಗೆಳೆಯರ ಜೊತೆ ಸೇರಿ ಈ ಕೃತ್ಯ ನಡೆಸಿದ್ದಾನೆ ಎಂದು ಹೇಳಿದರು.
ಹತಾಶ ತ್ರಿಶೂಲ್ ತನ್ನ ಸ್ನೇಹಿತರ ಜೊತೆ ಹೊಟೇಲ್‌ಗೆ ನುಗ್ಗಿ ಯುವತಿ ಮತ್ತು ಆಕೆಯ ಸ್ನೇಹಿತರ ಮೇಲೆ ಚೂರಿಯಿಂದ ಇರಿದು ಪ್ರತೀಕಾರ ತೀರಿಸಲು ಯತ್ನಿಸಿದ್ದಾನೆ. ಇದರಿಂದ ಪ್ರತೀಕ್ಷ್ ಎಂಬಾತನಿಗೆ ನಾಲ್ಕು ಕಡೆ ಚೂರಿ ಇರಿತದ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾನೆ.
ತ್ರಿಶೂಲ್ ಕ್ರಿಮಿನಲ್ ಹಿನ್ನೆಲೆ ಉಳ್ಳವನಾಗಿದ್ದು, ಆತನ ವಿರುದ್ಧ ಬಂದರು ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಅಲ್ಲದೆ, ಉರ್ವ ಠಾಣೆಯಲ್ಲೂ ಇತರ ಪ್ರಕರಣಗಳಲ್ಲಿ ಈತ ಬೇಕಾದವನಾಗಿದ್ದಾನೆ.
ಪ್ರೇಯಸಿ ತನ್ನ ಹುಟ್ಟುಹಬ್ಬದ ಪಾರ್ಟಿಯನ್ನು ನಗರದ ರೆಸ್ಟೋರೆಂಟಿನಲ್ಲಿ ಆಯೋಜಿಸಿದ್ದಳು. ಪ್ರಿಯಕರ ಸೇರಿದಂತೆ ಇತರ ಸ್ನೇಹಿತರಿಗೆ ಆಕೆ ಪಾರ್ಟಿ ನೀಡುತ್ತಿದ್ದಳು. ಈ ಸಂದರ್ಭ, ನುಗ್ಗಿ ದಾಂಧಲೆ ನಡೆಸಿದ ಘಟನೆ ನಡೆದಿದೆ.