ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಅಪ್ಲೈಡ್ ಜಿಯಾಲಜಿ ವಿಭಾಗದ ವತಿಯಿಂದ ಲಿವಿಂಗ್ ವಿತ್ ಸ್ನೇಕ್ಸ್ ಎಂಬ ಕಾರ್ಯಾಗಾರ ನಡೆಯಿತು.
ಕುವೆಂಪು ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ ಹಾವು ಮತ್ತು ನಾವು ಇದರ ಪ್ರಾಜೆಕ್ಟ್ ಮ್ಯಾನೇಜರ್ ಸ್ಫೂರ್ತಿ ಶೆಟ್ಟಿ ಹಾಗೂ ಹಾವು ಕಡಿತ ಶಿಕ್ಷಣ ತಜ್ಞ ವಿಪಿನ್ ರಾಯ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಹಾವು ಕಡಿತದಿಂದ ಪಾರಾಗುವ ಮಾರ್ಗಗಳು, ಕಡಿತಕ್ಕೊಳಗಾದ ಸಂತ್ರಸ್ತರಿಗೆ ಚಿಕಿತ್ಸೆ ನೀಡುವ ವಿಧಾನಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಪ್ರಾಯೋಗಿಕ ಮಾಹಿತಿ ಒದಗಿಸಿದರು.
ಕಾರ್ಯಾಗಾರ ಒಟ್ಟು ಎರಡು ದಿನಗಳ ಅವಧಿಯಿಂದ ಕೂಡಿತ್ತು. ಮೊದಲ ಅವಧಿಯಲ್ಲಿ 'ಮಾನವ ಮತ್ತು ಹಾವಿನ ಸಂಘರ್ಷ' ಹಾಗೂ ಹಾವು ಕಡಿತವಾದರೆ ಸಂತ್ರಸ್ತರಿಗೆ ಚಿಕಿತ್ಸೆ ನೀಡುವ ಸರಿಯಾದ ವಿಧಾನ ಎಂಬ ವಿಷಯದ ಮೇಲೆ ನಡೆಯಿತು. ಸ್ಫೂರ್ತಿ ಶೆಟ್ಟಿ ಈ ಬಗ್ಗೆ ಅಗತ್ಯ ಮಾಹಿತಿ ಒದಗಿಸಿ ಪ್ರಾಯೋಗಿಕವಾಗಿ ತಿಳಿಸಿದರು. ಇದರ ಜೊತೆ, ಭಾರತದಲ್ಲಿ ಕಂಡುಬರುವ ವಿಷಪೂರಿತ ಉರಗಗಳ ಬಗ್ಗೆ ವೈಚಾರಿಕ ಹಾಗೂ ಕುತೂಹಲಕರ ಮಾಹಿತಿಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಕಾರ್ಯಾಗಾರದ ಎರಡನೇ ಅವಧಿಯನ್ನು ವಿಪಿನ್ ರಾಯ್ ನಿರ್ವಹಿಸಿದರು. ಹಾವುಗಳ ಕಡಿತದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಹೇಗೆ ಎಂಬ ಮಾಹಿತಿ ನೀಡಿದರು. ಹಾವುಗಳ ಕಡಿತದಿಂದ ಸಂತ್ರಸ್ತರನ್ನು ಪಾರು ಮಾಡುವ ಸಂದರ್ಭದಲ್ಲಿ ತಮಗಾದ ಅನುಭವ ಮತ್ತು ಜ್ಞಾನವನ್ನು ಅವರು ಹಂಚಿಕೊಂಡರು.
ಈ ಸಂದರ್ಭದಲ್ಲಿ ಹಾವುಗಳ ಕಡಿತ ಹಾಗೂ ಭಾರತದಲ್ಲಿ ಮಾರಕ ಹಾವುಗಳ ಬಗ್ಗೆ ವಿವಿಧ ವೀಡಿಯೋ ಪದರ್ಶನವನ್ನೂ ನಡೆಸಲಾಯಿತು.
ಕಾಲೇಜಿನ ಸ್ನಾತಕೋತ್ತರ ವಿಭಾಗದ 250 ವಿದ್ಯಾರ್ಥಿಗಳು, ಎನ್‌ಎಸ್‌ಎಸ್, ಎನ್‌ಸಿಸಿ ರೆಡ್ ಕ್ರಾಸ್, ರೋರರ್ಸ್, ರೇಂಜರ್ಸ್ ಘಟಕದ ಸುಮಾರು 250 ಸ್ವಯಂ ಸೇವಕ ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಆಳ್ವಾಸ್ ಕಾಲೇಜಿನ ಪ್ರಿನ್ಸಿಪಾಲ್ ಡಾ. ಕುರಿಯನ್, ಸ್ನಾತಕೋತ್ತರ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗ ಸಂಯೋಜಕಿ ಡಾ. ರಶ್ಮಿ, ಐಕ್ಯೂಎಸಿ ಕಾರ್ಯಕಾರಿ ಸಮಿತಿ ಸದಸ್ಯೆ ಡಾ. ಶ್ರುತಿ ಎಸ್. ಮತ್ತು ಅಖಿಲೇಶ್, ಸ್ನಾತಕೋತ್ತರ ಪ್ರಾಣಿಶಾಸ್ತ್ರ ಉಪನ್ಯಾಸಕಿ ಪುಷ್ಪಾ ಜಿ.ಆರ್. ಉಪಸ್ಥಿತರಿದ್ದರು.
ಸ್ರೀ ಹರಿ ಸ್ವಾಗತಿಸಿ, ಜೆನ್ನಿಫರ್ ಪಿಂಟೋ ವಂದಿಸಿದರು. ಶ್ರುತಿ ಪ್ರಕಾಶ್ ಅತಿಥಿಗಳ ಪರಿಚಯ ನೀಡಿದರು. ಸಮೃದ್ಧಿ ಶೆಣೈ ಕಾರ್ಯಕ್ರಮ ನಿರೂಪಿಸಿದರು.