ಬೆಂಗಳೂರು: ರಾಜಕಾರಣಿಗಳ ಹೆಸರಲ್ಲಿ ಜನರಿಂದ ಭಾರೀ ಮೊತ್ತದ ಹಣ ಪಡೆದು ವಂಚಿಸುತ್ತಿದ್ದ ಕುಖ್ಯಾತ ಜ್ಯೋತಿಷಿ ಯುವರಾಜ್ ಎಂಬಾತನ ಜೊತೆ ಹಣಕಾಸು ವ್ಯವಹಾರ ನಡೆಸಿದ ಆರೋಪದ ಮೇಲೆ ಸಿಸಿಬಿ ಪೊಲೀಸರು ನಟಿ ಹಾಗೂ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಅವರಿಗೆ ನೋಟೀಸ್ ಜಾರಿಗೊಳಿಸಿದೆ.
ಶುಕ್ರವಾರ ಬೆಳಿಗ್ಗೆ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರು ಕೇಂದ್ರ ಅಪರಾಧ ವಿಭಾಗ-ಸಿಸಿಬಿ ತನ್ನ ನೋಟೀಸ್‌ನಲ್ಲಿ ಸೂಚಿಸಿದೆ.
ಯಾದವ್ ಎಂಬಾತ ಯುವರಾಜ್ ಹಾಗೂ ರಾಧಿಕಾ ಅವರ ಮಧ್ಯೆ ದಲ್ಲಾಳಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಆತನನ್ನೂ ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಸಿಸಿಬಿ ಪೊಲೀಸರು ತಿಳಿಸಿದೆ.
ರಾಧಿಕಾ ಕುಮಾರಸ್ವಾಮಿ ಅವರ ಸಹೋದರ ರವಿರಾಜ್ ಅವರಿಗೂ ಸಿಸಿಬಿ ನೋಟೀಸ್ ಜಾರಿಗೊಳಿಸಿದ್ದು, ಅವರು ಕೂಡ ವಿಚಾರಣೆಗೆ ಒಳಗಾಗಲಿದ್ದಾರೆ.
ಇದಕ್ಕೂ ಮುನ್ನ, ಪತ್ರಿಕಾಗೋಷ್ಠಿ ನಡೆಸಿದ್ದ ರಾಧಿಕಾ, ಜ್ಯೋತಿಷಿ ಹಾಗೂ ವಂಚಕ ಯುವರಾಜ್ ಜೊತೆ ಹಣಕಾಸಿನ ವ್ಯವಹಾರ ಇದ್ದದ್ದು ನಿಜ ಎಂದು ಒಪ್ಪಿಕೊಂಡಿದ್ದರು.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಅವರು, ಯುವರಾಜ್ ತಮ್ಮ ಕುಟುಂಬದ ಜ್ಯೋತಿಷಿ. ಕಳೆದ 17 ವರ್ಷಗಳಿಂದ ಅವರ ಪರಿಚಯ ಇದೆ ಎಂದು ಹೇಳಿದ್ದರು.
ತಮ್ಮ ಜೊತೆ ಸೇರಿ ಚಿತ್ರವೊಂದನ್ನು ನಿರ್ಮಿಸುವಂತೆ ಯುವರಾಜ್ ಕೇಳಿಕೊಂಡಿದ್ದರು. ಈ ಕಾರಣಕ್ಕಾಗಿ ಸುಮಾರು 15 ಲಕ್ಷ ರೂ. ಹಣವನ್ನು ನನ್ನ ಖಾತೆಗೆ ಜಮೆ ಮಾಡಿದ್ದರು. ಅಲ್ಲದೆ, ಬೇರೊಬ್ಬ ನಿರ್ಮಾಪಕರ ಖಾತೆಯಿಂದ 60 ಲಕ್ಷ ರೂ. ಹಣವನ್ನು ವರ್ಗಾಯಿಸಿದ್ದರು. ಆತ ತನ್ನ ಪತ್ನಿ ಹೆಸರಲ್ಲಿ ಪ್ರೊಡಕ್ಷನ್ ಹೌಸ್ ಹೊಂದಿದ್ದರು. ನಾನೂ ಚಿತ್ರ ನಿರ್ಮಾಣದ ಬ್ಯಾನರ್ ಹೊಂದಿದ್ದೆ. ನನಗೂ ಚಿತ್ರವೊಂದನ್ನು ನಿರ್ಮಿಸುವ ಬಯಕೆ ಇತ್ತು. ಹಾಗಾಗಿ ಒಪ್ಪಿಕೊಂಡೆ ಎಂದು ರಾಧಿಕಾ ಹೇಳಿದರು.
ಯುವರಾಜ್‌ನ ಬಂಧನವಾದಾಗ ಶಾಕ್ ಆಗಿದ್ದು ನಿಜ. ಆತ ನನ್ನ ಕುಟುಂಬದ ಜ್ಯೋತಿಷಿ. ಆತ ಹೇಳಿದ ಹಾಗೆ ಎಲ್ಲವೂ ನಡೆದಿದೆ. ನನಗೆ ಹೆಣ್ಣು ಮಗುವಾಗುತ್ತದೆ ಎಂದು ಹೇಳಿದ್ದ. ಹಾಗೆಯೇ ಆಗಿದೆ. ಒಂದು ವರ್ಷದಲ್ಲಿ ನನ್ನ ತಂದೆಯವರು ಸಾವನ್ನಪ್ಪುತ್ತಾರೆ ಎಂದು ಹೇಳಿದ್ದ. ಅದರಂತೆ ನನ್ನ ತಂದೆ ಮರು ವರ್ಷ ನಿಧನರಾಗಿದ್ದಾರೆ ಎಂದು ಹೇಳಿದ ರಾಧಿಕಾ, ನಾನು ಪ್ರಾಮಾಣಿಕಳಾಗಿದ್ದೇನೆ. ನನ್ನ ಎಲ್ಲ ವ್ಯವಹಾರವೂ ಪಾರದರ್ಶಕ. ಹಾಗಾಗಿ ನಾನು ಹೆದರುವ ಅಗತ್ಯವಿಲ್ಲ ಎಂದು ಹೇಳಿದರು.


