ಹೊಸೂರು (ತಮಿಳುನಾಡು):
ಜಪಾನಿ ಭಾಷೆ ಕಲಿಯುವ ಆಸಕ್ತಿಯೊಂದಿಗೆ ಮೊಬೈಲ್ ಆ್ಯಪ್‌ವೊಂದರಲ್ಲಿ ಶುರುವಾದ ಪರಿಚಯ ಪ್ರೀತಿಗೆ ತಿರುಗಿ, ಇದೀಗ ಗಡಿ ದಾಟಿದ ವಿವಾಹಕ್ಕೆ ಸಾಕ್ಷಿಯಾಗಿದೆ. ತಮಿಳುನಾಡಿನ ಹೊಸೂರು ಮೂಲದ ಪೈಲಟ್ ಒಬ್ಬರು ವಿಯೆಟ್ನಾಂ ದೇಶದ ಶಾಲಾ ಶಿಕ್ಷಕಿಯನ್ನು ತಿರುವಣ್ಣಾಮಲೈನಲ್ಲಿ ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದಾರೆ.
ಖಾಸಗಿ ವಿಮಾನಯಾನ ಸಂಸ್ಥೆಯ ಪೈಲಟ್ ಆಗಿರುವ ಕಾರ್ತಿಕೇಯನ್ (33) ಮತ್ತು ವಿಯೆಟ್ನಾಂನ ಖಾಸಗಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಟ್ರಿಯು ಥಿ ನ್ಗಾನ್ (Triu Thi Ngan - 23) ನವೆಂಬರ್ 13ರಂದು ತಿರುವಣ್ಣಾಮಲೈನ ಅರುಳ್ಮಿಗು ಶ್ರೀ ಅರುಣಾಗಿರಿನಾಥರ್ ದೇವಸ್ಥಾನದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
'ಹಲೋಟಾಕ್' ಆ್ಯಪ್‌ನಲ್ಲಿ ಚಿಗುರಿದ ಪ್ರೀತಿ:
ಭಾಷಾ ಕಲಿಕೆಯಿಂದ ಪ್ರೇಮದವರೆಗೆ: ಜಪಾನಿ ಭಾಷೆ ಕಲಿಯುವ ಸಮಾನ ಆಸಕ್ತಿಯಿಂದಾಗಿ ಕಾರ್ತಿಕೇಯನ್ ಮತ್ತು ಟ್ರಿಯು ಥಿ ನ್ಗಾನ್ 'ಹಲೋಟಾಕ್' (HelloTalk) ಆ್ಯಪ್ ಮೂಲಕ ಪರಿಚಯವಾಗಿದ್ದರು. ನಿರಂತರ ಸಂಭಾಷಣೆ, ಫೋನ್ ಹಾಗೂ ವಿಡಿಯೋ ಕರೆಗಳ ಮೂಲಕ ಬೆಳೆದ ಇವರ ಸ್ನೇಹ ಕ್ರಮೇಣ ಗಾಢ ಪ್ರೀತಿಗೆ ತಿರುಗಿತ್ತು.
ಭಾರತಕ್ಕೆ ಬಂದ ವಿಯೆಟ್ನಾಂ ಯುವತಿ: ಪರಸ್ಪರ ಭೇಟಿಯಾಗಲು ನಿರ್ಧರಿಸಿದ ಜೋಡಿಯ ನಿರ್ಧಾರದಂತೆ, ಕಳೆದ ಜೂನ್ ತಿಂಗಳಿನಲ್ಲಿ ಟ್ರಿಯು ಥಿ ನ್ಗಾನ್ ವಿಯೆಟ್ನಾಂನಿಂದ ಭಾರತಕ್ಕೆ ಬಂದು ಕಾರ್ತಿಕೇಯನ್ ಅವರನ್ನು ಭೇಟಿಯಾಗಿದ್ದರು. ಬಳಿಕ ಇಬ್ಬರೂ ಮದುವೆಯಾಗಲು ನಿಶ್ಚಯಿಸಿ ಎರಡೂ ಕುಟುಂಬಗಳ ಒಪ್ಪಿಗೆ ಪಡೆದಿದ್ದರು.
ವಧುವಿನ ಕುಟುಂಬಕ್ಕೆ ಪಾಸ್‌ಪೋರ್ಟ್ ಸಮಸ್ಯೆ – ನವದಂಪತಿ ಹೇಳಿದ್ದೇನು?
ವಿವಾಹದ ಕುರಿತು ಮಾತನಾಡಿದ ವರ ಕಾರ್ತಿಕೇಯನ್, "ವಿಯೆಟ್ನಾಂ ಯುವತಿಯನ್ನು ಮದುವೆಯಾಗುವ ಬಗ್ಗೆ ಪೋಷಕರ ಬಳಿ ಕೇಳಿದಾಗ ಆರಂಭದಲ್ಲಿ ಅವರು ಹಿಂಜರಿದಿದ್ದರು. ಆದರೆ, 'ಅದು ನಿನ್ನ ಜೀವನ, ನಿನ್ನ ಆಯ್ಕೆ' ಎಂದು ಬಳಿಕ ಒಪ್ಪಿಗೆ ನೀಡಿದರು. ನನ್ನ ಪತ್ನಿಯ ಕುಟುಂಬದವರು ಕೃಷಿ ವೃತ್ತಿಯಲ್ಲಿದ್ದು, ಪಾಸ್‌ಪೋರ್ಟ್ ಇಲ್ಲದ ಕಾರಣ ವಿಯೆಟ್ನಾಂನಿಂದ ಆಕೆಯ ಕುಟುಂಬಸ್ಥರಿಗೆ ಮದುವೆಗೆ ಬರಲು ಸಾಧ್ಯವಾಗಲಿಲ್ಲ. ಟ್ರಿಯು ಥಿ ನ್ಗಾನ್ ವಿಯೆಟ್ನಾಂನಲ್ಲಿ ಶಿಕ್ಷಕಿಯಾಗಿ ತಿಂಗಳಿಗೆ ₹1.25 ಲಕ್ಷ ವೇತನ ಪಡೆಯುತ್ತಿದ್ದರು. ಮದುವೆಯ ಬಳಿಕ ಭಾರತದಲ್ಲೇ ಉನ್ನತ ವ್ಯಾಸಂಗ ಮುಂದುವರಿಸಲು ಅವರು ಯೋಜಿಸಿದ್ದಾರೆ" ಎಂದು ತಿಳಿಸಿದ್ದಾರೆ.
ವಿಯೆಟ್ನಾಮೀಸ್ ಭಾಷೆಯಲ್ಲಿ ತಮ್ಮ ಸಂತಸ ಹಂಚಿಕೊಂಡ ವಧು ಟ್ರಿಯು ಥಿ ನ್ಗಾನ್, "ನಾವು ಪರಸ್ಪರ ಪರಿಚಯವಾಗಿ ಕೇವಲ ಒಂದು ವರ್ಷದಲ್ಲೇ ಮದುವೆಯಾಗಲು ನಿರ್ಧರಿಸಿದೆವು. ಮುಂದೆ ಭಾರತದಲ್ಲೇ ಉನ್ನತ ಶಿಕ್ಷಣ ಪಡೆದು ಇಲ್ಲಿಯೇ ಕೆಲಸ ಮಾಡುವ ಆಸೆ ಇದೆ. ಭಾರತವು ಅನೇಕ ಶ್ರೇಷ್ಠ ಆಧ್ಯಾತ್ಮಿಕ ಗುರುಗಳ ನಾಡಾಗಿದ್ದು, ಅವರನ್ನು ನೇರವಾಗಿ ಭೇಟಿಯಾಗಿ ಆಧ್ಯಾತ್ಮಿಕ ಬೋಧನೆಗಳನ್ನು ಅರಿಯಲು ನಾನು ಉತ್ಸುಕಳಾಗಿದ್ದೇನೆ. ಕಾರ್ತಿಕ್ ಅವರಂತಹ ಸಂಗಾತಿಯನ್ನು ನೀಡಿದ ಭಾರತದ ಬಗ್ಗೆ ನನಗೆ ಅಪಾರ ಗೌರವವಿದೆ" ಎಂದು ಭಾವುಕರಾಗಿ ನುಡಿದಿದ್ದಾರೆ.
.jpg)