ಜಬಲ್ಪುರ (ಮಧ್ಯಪ್ರದೇಶ):
ಪತಿ ಮತ್ತೊಬ್ಬ ಮಹಿಳೆಯೊಂದಿಗೆ ಹೋಟೆಲ್ ಕೊಠಡಿಯಲ್ಲಿದ್ದ ವೇಳೆ ದಿಢೀರ್ ದಾಳಿ ನಡೆಸಿದ ಪತ್ನಿಯೊಬ್ಬಳು, ಇಬ್ಬರಿಗೂ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿ ರಂಪಾಟ ನಡೆಸಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ. ಹೋಟೆಲ್‌ನಲ್ಲಿ ಭಾರಿ ಗದ್ದಲ ಸೃಷ್ಟಿಯಾದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಮೊಬೈಲ್ ಚಾಟ್ ನೋಡಿ ಬೆನ್ನಟ್ಟಿ ಬಂದಿದ್ದ ಪತ್ನಿ:
ಸವಿತಾ ಯಾದವ್ ಎಂಬ ಮಹಿಳೆ ತನ್ನ ಪತಿ ಅರುಣ್ ಯಾದವ್, ಜ್ಯೋತಿ ಕೋರಿ ಎಂಬಾಕೆಯೊಂದಿಗೆ ಕಳೆದೊಂದು ವರ್ಷದಿಂದ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಲ್ಲಿದ್ದರು. ಇತ್ತೀಚೆಗೆ ಪತಿಯ ಮೊಬೈಲ್ ಫೋನ್ ಪರಿಶೀಲಿಸಿದಾಗ, ಅವರಿಬ್ಬರೂ ಸ್ಥಳೀಯ ಹೋಟೆಲ್ ಒಂದರಲ್ಲಿ ಭೇಟಿಯಾಗಲು ಯೋಜಿಸಿರುವ ಚಾಟಿಂಗ್ ವಿವರಗಳು ಸವಿತಾಳ ಕಣ್ಣಿಗೆ ಬಿದ್ದಿವೆ.
ತಕ್ಷಣವೇ ಪತಿಯನ್ನು ಹಿಂಬಾಲಿಸಿಕೊಂಡು ಹೋಟೆಲ್‌ಗೆ ತೆರಳಿದ ಸವಿತಾ, ಅವರಿಬ್ಬರಿದ್ದ ಕೊಠಡಿಯ ಬಾಗಿಲನ್ನು ಬಡಿದು ತೆರೆಸಿದ್ದಾಳೆ. ಒಳಗಡೆ ಪತಿ ಹಾಗೂ ಆತನ ಪ್ರೇಯಸಿ ಆಕ್ಷೇಪಾರ್ಹ ಸ್ಥಿತಿಯಲ್ಲಿರುವುದನ್ನು ಕಂಡು ಆಕ್ರೋಶಗೊಂಡಿದ್ದಾಳೆ.
ಕೊಠಡಿಯಲ್ಲೇ ಕಪಾಳಮೋಕ್ಷ – ಹೋಟೆಲ್‌ನಲ್ಲಿ ಗದ್ದಲ:
ಕೊಠಡಿಯೊಳಗೆ ನುಗ್ಗಿದ ಸವಿತಾ, ಪತಿ ಅರುಣ್ ಮತ್ತು ಆತನ ಜತೆಗಿದ್ದ ಜ್ಯೋತಿ ಇಬ್ಬರ ಮೇಲೂ ಮುಗಿಬಿದ್ದು ಸತತವಾಗಿ ಕಪಾಳಮೋಕ್ಷ ಮಾಡಿದ್ದಾಳೆ. ತೀವ್ರ ವಾಗ್ವಾದ ಹಾಗೂ ಕೂಗಾಟದ ಶಬ್ದ ಕೇಳಿ ಹೋಟೆಲ್ ಸಿಬ್ಬಂದಿ ಮತ್ತು ಗ್ರಾಹಕರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಗಲಾಟೆ ವಿಕೋಪಕ್ಕೆ ಹೋದಾಗ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಇತ್ತಂಡಗಳನ್ನು ಪ್ರತ್ಯೇಕಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು.
ಬ್ಲ್ಯಾಕ್‌ಮೇಲ್ ಆರೋಪ:
ಪೊಲೀಸರ ಎದುರು ಅಳಲು ತೋಡಿಕೊಂಡ ಸವಿತಾ, "ಇವರಿಬ್ಬರ ನಡುವೆ ದೀರ್ಘಕಾಲದಿಂದ ಅಕ್ರಮ ಸಂಬಂಧವಿದೆ. ಜ್ಯೋತಿ ನನ್ನ ಪತಿಯನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದು, ಆ ಕಾರಣಕ್ಕಾಗಿಯೇ ಆತ ನನ್ನಿಂದ ದೂರವಾಗುತ್ತಿದ್ದಾನೆ" ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸವಿತಾ ಅವರ ಆರೋಪಗಳ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಘಟನೆ ಸಂಬಂಧ ಸದ್ಯಕ್ಕೆ ಯಾವುದೇ ಕಡೆಯಿಂದಲೂ ಲಿಖಿತ ದೂರು ದಾಖಲಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
