ಮಡಿಕೇರಿ:
ಕಾರು ಚಾಲಕನ ನಿಯಂತ್ರಣ ತಪ್ಪಿ ಕಾಫಿ ತೋಟದ ಕೆರೆಗೆ ಉರುಳಿಬಿದ್ದ ಪರಿಣಾಮ ದಂಪತಿ ಹಾಗೂ ಅವರ ನಾಲ್ಕು ವರ್ಷದ ಪುಟ್ಟ ಹೆಣ್ಣುಮಗು ನೀರಿನಲ್ಲಿ ಮುಳುಗಿ ದುರ್ಮರಣಕ್ಕೀಡಾಗಿರುವ ದಾರುಣ ಘಟನೆ ಕೊಡಗು ಜಿಲ್ಲೆಯ ಸಿದ್ದಾಪುರ ಸಮೀಪದ ಬಡಗ ಬಣಂಗಾಲ ಗ್ರಾಮದಲ್ಲಿ ನಡೆದಿದೆ.
ಸಿದ್ದಾಪುರದ ಹೈಸ್ಕೂಲ್ ಪೈಸಾರಿ ನಿವಾಸಿಗಳಾದ ವಿಜೇಶ್ (36), ಅವರ ಪತ್ನಿ ಪ್ರಮಿತಾ (34) ಹಾಗೂ 4 ವರ್ಷದ ಪುತ್ರಿ ಲಿಯಾ ಮೃತ ದುರ್ದೈವಿಗಳಾಗಿದ್ದಾರೆ.
ಘಟನೆಯ ವಿವರ:
ಮಂಗಳವಾರ ತಡರಾತ್ರಿ ಈ ಕುಟುಂಬವು ಸಿದ್ದಾಪುರದಿಂದ ಬಣಂಗಾಲ ಗ್ರಾಮದ ಕಡೆಗೆ ತಮ್ಮ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ ಎಂದು ಶಂಕಿಸಲಾಗಿದೆ.
ಬುಧವಾರ ಬೆಳಿಗ್ಗೆ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕೆರೆಯಲ್ಲಿ ಕಾರು ಮುಳುಗಿರುವುದನ್ನು ಗಮನಿಸಿ ತಕ್ಷಣ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರು ಹಾಗೂ ಕಾರ್ಮಿಕರು ಸ್ಥಳಕ್ಕೆ ಧಾವಿಸಿ ಕೆರೆಯೊಳಗಿದ್ದ ಕಾರನ್ನು ಪರಿಶೀಲಿಸಿದಾಗ, ಕಾರಿನೊಳಗೆ ಮೂವರ ಮೃತದೇಹಗಳು ಪತ್ತೆಯಾಗಿವೆ.
ದಟ್ಟ ಮಂಜಿನಿಂದ ತಿರುವು ಕಾಣದೆ ಅನಾಹುತ ಶಂಕೆ:
ಮಾಹಿತಿ ತಿಳಿಯುತ್ತಿದ್ದಂತೆ ಸಿದ್ದಾಪುರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಸ್ಥಳೀಯರ ನೆರವಿನೊಂದಿಗೆ ಕೆರೆಯಿಂದ ಕಾರು ಹಾಗೂ ಮೂವರ ಮೃತದೇಹಗಳನ್ನು ಹೊರತೆಗೆದು ತನಿಖೆ ಆರಂಭಿಸಿದ್ದಾರೆ.
ರಸ್ತೆಯ ಕಡಿದಾದ ತೀಕ್ಷ್ಣ ತಿರುವಿನ ಬಳಿಯೇ ಈ ಕೆರೆ ಇದೆ. ರಾತ್ರಿ ವೇಳೆಯಲ್ಲಿ ಆ ಭಾಗದಲ್ಲಿ ದಟ್ಟವಾದ ಮಂಜು ಕವಿದಿದ್ದ ಕಾರಣ ರಸ್ತೆಯ ತಿರುವು ಸ್ಪಷ್ಟವಾಗಿ ಗೋಚರಿಸದೆ ಚಾಲಕ ನಿಯಂತ್ರಣ ಕಳೆದುಕೊಂಡು ನೇರವಾಗಿ ಕೆರೆಗೆ ಬಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣ ಸಂಬಂಧ ಸಿದ್ದಾಪುರ ಠಾಣಾ ಪೊಲೀಸರು ಕೇಸ್ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
