ಬಾಲಿವುಡ್‌ನ ಹಿರಿಯ ನಟ ದಿವಂಗತ ವಿನೋದ್ ಖನ್ನಾ ಅವರ ವೃತ್ತಿಜೀವನದ ಹಳೆಯ ಮತ್ತು ಅಚ್ಚರಿಯ ಘಟನೆಯೊಂದು ಸಾಮಾಜಿಕ ಜಾಲತಾಣಗಳು ಹಾಗೂ ಸಿನಿಪ್ರಿಯರ ವಲಯದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ಖ್ಯಾತ ನಟಿ ಡಿಂಪಲ್ ಕಪಾಡಿಯಾ ಜೊತೆಗಿನ ಇಂಟಿಮೇಟ್ ದೃಶ್ಯದ ಚಿತ್ರೀಕರಣದ ವೇಳೆ ನಿರ್ದೇಶಕ ಮಹೇಶ್ ಭಟ್ ‘ಕಟ್’ ಹೇಳಿದ ಹೊರತಾಗಿಯೂ ವಿನೋದ್ ಖನ್ನಾ ಮುತ್ತಿಕ್ಕುವುದನ್ನು ಮುಂದುವರಿಸಿದ್ದರು ಎಂಬ ವರದಿಗಳು ಚರ್ಚೆಗೆ ಗ್ರಾಸವಾಗಿವೆ.
ಓಶೋ ಆಶ್ರಮದಿಂದ ಬಾಲಿವುಡ್‌ಗೆ ರೀ-ಎಂಟ್ರಿ ಕೊಟ್ಟಿದ್ದ ಕಾಲ:
ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ನಟನೆಯಿಂದ ದೂರ ಸರಿದು ಆಧ್ಯಾತ್ಮಿಕ ಗುರು ಓಶೋ ರಜನೀಶ್ ಅವರ ಆಶ್ರಮ ಸೇರಿದ್ದ ವಿನೋದ್ ಖನ್ನಾ, ಸುಮಾರು ಐದು ವರ್ಷಗಳ ಕಾಲ ಸಿನಿಮಾರಂಗದಿಂದ ಸಂಪೂರ್ಣವಾಗಿ ಕಣ್ಮರೆಯಾಗಿದ್ದರು. ಬಳಿಕ ಬಾಲಿವುಡ್‌ಗೆ ಭರ್ಜರಿ ಕಮ್‌ಬ್ಯಾಕ್ ಮಾಡಿದ ಅವರು ಹಲವು ಚಿತ್ರಗಳನ್ನು ಒಪ್ಪಿಕೊಂಡಿದ್ದರು. ಆ ಪೈಕಿ ಮಹೇಶ್ ಭಟ್ ನಿರ್ದೇಶನದ, ಡಿಂಪಲ್ ಕಪಾಡಿಯಾ ನಾಯಕಿಯಾಗಿದ್ದ ‘ಪ್ರೇಮ್ ಧರಮ್’ ಚಿತ್ರವೂ ಒಂದಾಗಿತ್ತು.
ಚಿತ್ರೀಕರಣದ ವೇಳೆ ನಡೆದಿದ್ದೇನು?
ವರದಿಗಳ ಪ್ರಕಾರ, ಈ ಚಿತ್ರಕ್ಕಾಗಿ ವಿನೋದ್ ಖನ್ನಾ ಮತ್ತು ಡಿಂಪಲ್ ಕಪಾಡಿಯಾ ನಡುವೆ ತಬ್ಬಿಕೊಳ್ಳುವ ಹಾಗೂ ಕಿಸ್ ಮಾಡುವ ದೃಶ್ಯವೊಂದರ ಶೂಟಿಂಗ್ ನಡೆಯುತ್ತಿತ್ತು. ದೃಶ್ಯ ಮುಗಿದ ತಕ್ಷಣ ನಿರ್ದೇಶಕ ಮಹೇಶ್ ಭಟ್ ‘ಕಟ್’ ಎಂದು ಜೋರಾಗಿ ಸೂಚನೆ ನೀಡಿದ್ದರು. ಆದರೆ, ವಿನೋದ್ ಖನ್ನಾ ನಿರ್ದೇಶಕರ ಮಾತನ್ನು ಗಮನಿಸದೆ ಕೆಲ ಕ್ಷಣಗಳ ಕಾಲ ಕಿಸ್ ಮಾಡುವುದನ್ನು ಮುಂದುವರಿಸಿದ್ದರು ಎನ್ನಲಾಗಿದೆ.
ಅಂತಿಮವಾಗಿ ನಿರ್ದೇಶಕ ಮಹೇಶ್ ಭಟ್ ಹಾಗೂ ಚಿತ್ರತಂಡದ ಸದಸ್ಯರೇ ನೇರವಾಗಿ ಮಧ್ಯಪ್ರವೇಶಿಸಿ ಚಿತ್ರೀಕರಣವನ್ನು ನಿಲ್ಲಿಸಬೇಕಾಯಿತು.
ಆಘಾತದಿಂದ ಮೇಕಪ್ ರೂಮ್‌ಗೆ ಓಡಿಹೋಗಿದ್ದ ಡಿಂಪಲ್; ಕ್ಷಮೆಯಾಚಿಸಿದ್ದ ಖನ್ನಾ:
ಈ ಅನಿರೀಕ್ಷಿತ ಬೆಳವಣಿಗೆಯಿಂದ ನಟಿ ಡಿಂಪಲ್ ಕಪಾಡಿಯಾ ತೀವ್ರ ಆಘಾತಕ್ಕೊಳಗಾಗಿ, ಮುಜುಗರದಿಂದ ನೇರವಾಗಿ ಮೇಕಪ್ ರೂಮ್‌ಗೆ ತೆರಳಿ ಬಾಗಿಲು ಹಾಕಿಕೊಂಡಿದ್ದರು ಎಂದು ಹೇಳಲಾಗಿದೆ.
ಬಳಿಕ ಮಹೇಶ್ ಭಟ್ ಅವರು ವಿನೋದ್ ಖನ್ನಾ ಅವರೊಂದಿಗೆ ಮಾತನಾಡಿ, ಡಿಂಪಲ್ ಬಳಿ ಹೋಗಿ ಪರಿಸ್ಥಿತಿಯನ್ನು ವಿವರಿಸಿ ಕ್ಷಮೆಯಾಚಿಸುವಂತೆ ತಿಳಿಸಿದ್ದರು. ನಿರ್ದೇಶಕರ ಸೂಚನೆಯಂತೆ ವಿನೋದ್ ಖನ್ನಾ ನಟಿಯ ಬಳಿ ಕ್ಷಮೆ ಕೋರಿದ್ದರು. ಈ ಬಗ್ಗೆ ಭಿನ್ನ ವಾದಗಳಿದ್ದು, ನಿರ್ದೇಶಕರ 'ಕಟ್' ಧ್ವನಿ ವಿನೋದ್ ಖನ್ನಾ ಅವರಿಗೆ ಕೇಳಿಸಿರಲಿಲ್ಲ ಎಂದು ಕೆಲವರು ಹೇಳಿದರೆ, ದೀರ್ಘಕಾಲದ ನಂತರ ಚಿತ್ರರಂಗಕ್ಕೆ ಮರಳಿದ್ದ ಕಾರಣ ನಟ ಆ ದೃಶ್ಯದಲ್ಲಿ ಅತಿಯಾಗಿ ಲೀನವಾಗಿದ್ದರು ಎಂದು ಮತ್ತೆ ಕೆಲ ವರದಿಗಳು ಉಲ್ಲೇಖಿಸಿವೆ.