ಸಿಂಗಾಪುರ: ವಿಶ್ವದಲ್ಲೇ ರಾಜಕೀಯ ನಾಯಕರಿಗೆ ಅತಿ ಹೆಚ್ಚು ವೇತನ ನೀಡುವ ರಾಷ್ಟ್ರ ಎಂಬ ಹೆಗ್ಗಳಿಕೆ ಹೊಂದಿರುವ ಸಿಂಗಾಪುರ, ತನ್ನ ಸಚಿವರು ಹಾಗೂ ಸಂಸದರ ವೇತನವನ್ನು ಮತ್ತೆ ಭಾರಿ ಪ್ರಮಾಣದಲ್ಲಿ ಹೆಚ್ಚಿಸಲು ಮುಂದಾಗಿದೆ. ನೂತನ ಪರಿಷ್ಕರಣೆಯ ಪ್ರಕಾರ ಸಿಂಗಾಪುರ ಪ್ರಧಾನಿ ಲಾರೆನ್ಸ್ ವಾಂಗ್ ಅವರ ವಾರ್ಷಿಕ ಮೂಲ ವೇತನವು (ಬೆಂಚ್‌ಮಾರ್ಕ್ ಸ್ಯಾಲರಿ) ಶೇ. 60ಕ್ಕೂ ಹೆಚ್ಚು ಹೆಚ್ಚಳವಾಗಲಿದ್ದು, ವಾರ್ಷಿಕ ಸುಮಾರು 3.6 ಮಿಲಿಯನ್ ಸಿಂಗಾಪುರ ಡಾಲರ್‌ಗೆ (ಅಂದಾಜು ₹27 ಕೋಟಿ) ಏರಿಕೆಯಾಗಲಿದೆ ಎಂದು ಸ್ವತಃ ಪ್ರಧಾನಿ ಸಂಸತ್ತಿಗೆ ತಿಳಿಸಿದ್ದಾರೆ.
ಆದಾಗ್ಯೂ, ತಮ್ಮ ಅವಧಿಯಲ್ಲಿ ತಮಗೆ ಹೆಚ್ಚುವರಿಯಾಗಿ ಸಿಗುವ ಸಂಪೂರ್ಣ ವೇತನ ಹೆಚ್ಚಳದ ಮೊತ್ತವನ್ನು ಸೂಕ್ತ ಸಾಮಾಜಿಕ ಹಾಗೂ ಸತ್ಕಾರ್ಯಗಳಿಗೆ (Good causes) ದೇಣಿಗೆ ನೀಡುವುದಾಗಿ ಪ್ರಧಾನಿ ವಾಂಗ್ ಘೋಷಿಸಿದ್ದಾರೆ.
ಪ್ರಮುಖರ ನೂತನ ವೇತನ ಶ್ರೇಣಿ (ಬೆಂಚ್‌ಮಾರ್ಕ್):
- ಪ್ರಧಾನ ಮಂತ್ರಿ: ಈ ಹಿಂದಿದ್ದ 2.2 ಮಿಲಿಯನ್ ಸಿಂಗಾಪುರ ಡಾಲರ್‌ನಿಂದ (ಸುಮಾರು ₹16.5 ಕೋಟಿ) 3.6 ಮಿಲಿಯನ್ ಸಿಂಗಾಪುರ ಡಾಲರ್‌ಗೆ (ಸುಮಾರು ₹27 ಕೋಟಿ) ಏರಿಕೆ.
- ಉಪ ಪ್ರಧಾನಿ: ಈ ಹಿಂದಿನ 1.87 ಮಿಲಿಯನ್‌ನಿಂದ (ಸುಮಾರು ₹14.02 ಕೋಟಿ) 3.06 ಮಿಲಿಯನ್ ಸಿಂಗಾಪುರ ಡಾಲರ್‌ಗೆ (ಸುಮಾರು ₹22.94 ಕೋಟಿ) ಹೆಚ್ಚಳ.
- ಕ್ಯಾಬಿನೆಟ್ ಸಚಿವರು: ಹಿರಿತನ ಮತ್ತು ಖಾತೆಗಳ ಜವಾಬ್ದಾರಿಗೆ ಅನುಗುಣವಾಗಿ 1.80 ಮಿಲಿಯನ್‌ನಿಂದ (₹13.5 ಕೋಟಿ) 2.88 ಮಿಲಿಯನ್ ಸಿಂಗಾಪುರ ಡಾಲರ್‌ವರೆಗೆ (₹21.59 ಕೋಟಿ) ನಿಗದಿ.
- ಸಂಸದರ ಮಾಸಿಕ ಭತ್ಯೆ: ಸಂಸದರ (MP) ಮಾಸಿಕ ಭತ್ಯೆಯನ್ನು 13,750 ಸಿಂಗಾಪುರ ಡಾಲರ್‌ನಿಂದ 18,500 ಸಿಂಗಾಪುರ ಡಾಲರ್‌ಗೆ ಹೆಚ್ಚಿಸಲಾಗಿದೆ.
ಅಕ್ಟೋಬರ್ 15ರಿಂದ ಜಾರಿ – ತಕ್ಷಣವೇ ಪೂರ್ಣ ಮೊತ್ತ ಸಿಗಲ್ಲ:
ಈ ನೂತನ ದರಗಳು ಕೇವಲ ಗರಿಷ್ಠ ಮಿತಿಯ ಬೆಂಚ್‌ಮಾರ್ಕ್ ಆಗಿದ್ದು, ಸಚಿವರಿಗೆ ತಕ್ಷಣವೇ ಪೂರ್ತಿ ಮೊತ್ತ ಸಿಗುವುದಿಲ್ಲ. ಪ್ರಸ್ತುತ ಅಧಿಕಾರದಲ್ಲಿರುವ ಸಚಿವರಿಗೆ ಅಕ್ಟೋಬರ್ 15ರಿಂದ ಗರಿಷ್ಠ ಶೇ. 9ರಷ್ಟು ಮಾತ್ರ ಏಕಕಾಲೀನ ಹೊಂದಾಣಿಕೆ (one-off adjustment) ಸಿಗಲಿದ್ದು, ಮುಂದಿನ ಏರಿಕೆಗಳು ಅವರ ಕಾರ್ಯಕ್ಷಮತೆ ಮತ್ತು ಜವಾಬ್ದಾರಿಯನ್ನು ಆಧರಿಸಿ ನಿರ್ಧಾರವಾಗಲಿವೆ.
ವೇತನ ಹೆಚ್ಚಳಕ್ಕೆ ಸರ್ಕಾರದ ಸಮರ್ಥನೆ:
ಸಿಂಗಾಪುರದಲ್ಲಿ ರಾಜಕೀಯ ನಾಯಕರ ವೇತನವನ್ನು 15 ವರ್ಷಗಳ ಹಿಂದೆ ಪರಿಷ್ಕರಿಸಲಾಗಿತ್ತು. ಸರ್ಕಾರದ ಸಮರ್ಥನೆಗಳು ಹೀಗಿವೆ:
- ಪ್ರತಿಭಾವಂತರ ಕೊರತೆ & ಉತ್ತರಾಧಿಕಾರ ಸವಾಲು: ಖಾಸಗಿ ರಂಗದ ಸಿಇಒಗಳು, ಉನ್ನತ ಅಧಿಕಾರಿಗಳು ಕೋಟ್ಯಂತರ ರೂಪಾಯಿ ಗಳಿಸುತ್ತಿದ್ದು, ಅವರನ್ನು ರಾಜಕೀಯಕ್ಕೆ ಕರೆತರಲು ಈ ವೇತನ ಅಗತ್ಯ. ಆಡಳಿತದಲ್ಲಿ ಮುಂದಿನ ತಲೆಮಾರಿನ ಸಮರ್ಥ ನಾಯಕರನ್ನು ಆಕರ್ಷಿಸಲು ಹಣಕಾಸಿನ ತ್ಯಾಗವು ಅತಿಯಾಗಿರಬಾರದು ಎಂಬುದು ಸರ್ಕಾರದ ವಾದ.
- ಭ್ರಷ್ಟಾಚಾರ ಮುಕ್ತ ಆಡಳಿತ: ಮುಕ್ತ ಮತ್ತು ಅಧಿಕೃತವಾಗಿ ಹೆಚ್ಚಿನ ವೇತನ ('Clean Wage') ನೀಡುವುದರಿಂದ ಯಾವುದೇ ಕಳ್ಳದಾರಿ ಅಥವಾ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದಂತೆ ಪಾರದರ್ಶಕ ಆಡಳಿತ ನೀಡಲು ಸಾಧ್ಯವಾಗುತ್ತದೆ ಎಂದು ಸಿಂಗಾಪುರ ಸರ್ಕಾರ ಸ್ಪಷ್ಟಪಡಿಸಿದೆ.
