ಹಣದಾಸೆಗೆ ಹೆತ್ತ ಮಗಳನ್ನೇ ವೇಶ್ಯಾವಾಟಿಕೆ ದಂಧೆಗೆ ದೂಡಿದ ಪಾಪಿ ತಂದೆ




ಚಿಕ್ಕಮಗಳೂರು: ತಮಗೆ ಎಷ್ಟೇ ಕಷ್ಟವಿದ್ದರೂ ತಮ್ಮ ಮಕ್ಕಳು ಚನ್ನಾಗಿರಲೆಂದು ಹೆತ್ತವರು ಯೋಚಿಸುತ್ತಾರೆ. ಆದರೆ ಇಲ್ಲೊಬ್ಬ ಕಟುಕ ಅಪ್ಪ ಹೆತ್ತ ಮಗಳನ್ನೇ ವೇಶ್ಯಾವಾಟಿಕೆ ದಂಧೆಗಿಳಿಸಿದ್ದಾನೆ. ಹಣದಾಸೆಗಾಗಿ ಅಪ್ರಾಪ್ತ ಪುತ್ರಿಯನ್ನು ದಂಧೆಗೆ ದೂಡಿರುವ ಅಮಾನವೀಯ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ ನಡೆದಿದೆ.


ದಿನಕ್ಕೆ 5 ಸಾವಿರ ರೂ. ಸಿಗುತ್ತದೆಯೆಂಬ ಆಸೆಗೆ ಬಿದ್ದ ಪಾಪಿ ತಂದೆ ಹೆತ್ತ ಮಗಳನ್ನೇ ದಂಧೆಗೆ ಒಪ್ಪಿಸಿದ್ದಾನೆ ಎನ್ನಲಾಗಿದೆ. ತಾಯಿಯನ್ನು ಕಳೆದುಕೊಂಡು ಸಂಬಂಧಿಕರ ಮನೆಯಲ್ಲಿದ್ದ ಅಪ್ರಾಪ್ತೆ, ಪಿಯುಸಿ ವ್ಯಾಸಂಗ ಪೂರೈಸಿ ತಂದೆ ಮನೆಗೆ ಮರಳಿದ್ದಳು. ಡಿಸೆಂಬರ್​ನಲ್ಲಿ ತಂದೆಯೊಂದಿಗೆ ಅಜ್ಜಿಯ ಮನೆಗೆ ಹೋಗಿ 2 ದಿನ ಉಳಿದಿದ್ದು ಬಂದಿದ್ದಳು. ಮತ್ತೊಮ್ಮೆ ಅಜ್ಜಿಯಿಂದ ಕರೆ ಬಂದಿದೆಯೆಂದು ಆಕೆಯ ಮನೆಗೆ ಹೋದ ಬಾಲಕಿಗೆ ಕಂಟಕ ಕಾದಿತ್ತು. ಅದೇ ಸಂದರ್ಭದಲ್ಲಿ ಅಜ್ಜಿಯ ಮನೆಗೆ ಆಗಮಿಸಿದ್ದ ಭರತ್ ಶೆಟ್ಟಿ ಎಂಬಾತ ತಂದೆ- ಮಗಳೊಡನೆ ಸಲುಗೆ ಬೆಳೆಸಿದ್ದ. ತನ್ನ ಮನೆಗೆ ಬಂದು ತಂಗುವಂತೆಯೂ ತಿಳಿಸಿದ್ದ.


ಇದಕ್ಕೊಪ್ಪಿದ್ದ ತಂದೆ ಮಗಳಿಬ್ಬರೂ ಭರತ್​ ಶೆಟ್ಟಿಯೊಂದಿಗೆ ಮಂಗಳೂರಿಗೆ ತೆರಳಿದ್ದರು. ಈ ವೇಳೆ ತಾನು ಋತುಮತಿ ಆಗಿರುವುದಾಗಿ ತಂದೆಗೆ ತಿಳಿಸಿದ್ದಳು. ಆದಾಗಿಯೂ ಮರುದಿನ ಅಪ್ರಾಪ್ತೆ ಬಳಿ ಬಂದ ಭರತ್ ಶೆಟ್ಟಿ, 4-5 ಮಂದಿ ಬರುತ್ತಾರೆ, ಅವರೊಂದಿಗೆ ದೈಹಿಕ ಸಂಪರ್ಕ ಬೆಳೆಸುವಂತೆ ಒತ್ತಾಯಿಸಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಇದಕ್ಕೆ ಒಪ್ಪದಿದ್ದರೂ ಬಲವಂತ ಮಾಡಿದ್ದಾನೆ‌. ಆತನ ಮಾತಿನಂತೆ 20ರಿಂದ 45 ವರ್ಷ ವಯೋಮಿತಿಯ ನಾಲ್ವರು ಒಬ್ಬರಾದ ಮೇಲೊಬ್ಬರಂತೆ ಆಕೆಯೊಂದಿಗೆ ಲೈಂಗಿಕ ಸಂಪರ್ಕ ಮಾಡಿದ್ದಾರೆ. ಇದಾದ ಮರುದಿನವೂ ಇದೇ ಕೆಲಸಕ್ಕೆ ಒತ್ತಾಯಿಸಿದಾಗ ಹುಡುಗಿ ನಿರಾಕರಿಸಿದ್ದಾಳೆ. ಆದರೂ ಮತ್ತೊಮ್ಮೆ ಆಕೆಯ ಮೇಲೆ ಅದೇ ರೀತಿಯ ಲೈಂಗಿಕ ದೌರ್ಜನ್ಯ ನಡೆದಿತ್ತು. ಈ ವೇಳೆ ತಾನು ಅಪ್ರಾಪ್ತೆ, ತನ್ನನ್ನು ಬಿಡಿ ಎಂದು ಎಷ್ಟೇ ಅಂಗಲಾಚಿದರೂ ಕೇಳದ ಕಾಮುಕರು, ನಾವು ಭರತ್ ಶೆಟ್ಟಿಗೆ ಹಣ ನೀಡಿದ್ದೇವೆಂದು ಹೇಳಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದರು.


ಅಪ್ರಾಪ್ತೆ ನೀಡಿದ ದೂರಿನ ಮೇರೆಗೆ FIR ದಾಖಲಾಗಿದ್ದು, ಬಾಲಕಿಯ ತಂದೆ, ಅಜ್ಜಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಾಂಸ ದಂಧೆಯ ಕಿಂಗ್‌ಪಿನ್ ಎನ್ನಲಾಗಿರುವ ಭರತ್ ಶೆಟ್ಟಿ ಸೇರಿದಂತೆ ಒಟ್ಟು 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಭರತ್ ಶೆಟ್ಟಿಯ ವಿರುದ್ಧ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ವೇಶ್ಯಾವಾಟಿಕೆ ಸಂಬಂಧ 8ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಇನ್ನಷ್ಟು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.


BREAKING NEWS
Loading latest news...
Join our WhatsApp Channel Powered By : Online Pudu