-->
ಮನೆಯಲ್ಲಿ ಜಗಳ, ಖರ್ಚಿಗೆ ದುಡ್ಡಿಲ್ಲ- ಹೊಟೇಲ್‌ ಬುಕ್ ಮಾಡಿ ಖೋಟಾನೋಟು ಪ್ರಿಂಟ್ ಮಾಡಿದ್ದ ಯುವಕ ಅಂದರ್

ಮನೆಯಲ್ಲಿ ಜಗಳ, ಖರ್ಚಿಗೆ ದುಡ್ಡಿಲ್ಲ- ಹೊಟೇಲ್‌ ಬುಕ್ ಮಾಡಿ ಖೋಟಾನೋಟು ಪ್ರಿಂಟ್ ಮಾಡಿದ್ದ ಯುವಕ ಅಂದರ್


ಬೆಂಗಳೂರು: ಖರ್ಚಿಗೆ ದುಡ್ಡಿಲ್ಲವೆಂದು ಟೆಕ್ಸ್​​ಟೈಲ್ಸ್​ ಉದ್ಯಮಿಯ ಪುತ್ರನೋರ್ವನು ಖೋಟಾ ನೋಟು ಪ್ರಿಂಟ್ ಮಾಡಿರುವ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಇದೀಗ ಖೋಟಾನೋಟು ಪ್ರಿಂಟ್ ಮಾಡಿದ್ದ ಯುವಕ ಪೊಲೀಸ್ ಅತಿಥಿಯಾಗಿದ್ದಾನೆ.

ಕ್ರಿಷ್ ಮಾಲಿ (23) ಎಂಬಾತನೇ ನಕಲಿ ನೋಟು ಪ್ರಿಂಟ್ ಮಾಡಿದ್ದ ಖದೀಮ.

ಟೆಕ್ಸ್‌ಟೈಲ್ಸ್ ಉದ್ಯಮಿ ಪುತ್ರನಾಗಿರುವ ಕ್ರಿಷ್ ಮಾಲಿ ಖೋಟಾ ನೋಟು ಪ್ರಿಂಟ್ ಮಾಡಲೆಂದೇ ಹೋಟೆಲೊಂದರಲ್ಲಿ ರೂಮ್ ಬುಕ್ ಮಾಡಿದ್ದ. ಆತ ಹೊಟೇಲ್‌ಗೆ ಬರುವಾಗ ಪ್ರಿಂಟರ್, ಸ್ಕ್ಯಾನರ್‌ಗಳನ್ನೂ ತಂದಿದ್ದ. ಬಳಿಕ ಹೋಟೆಲ್‌ನಲ್ಲಿ ಕುಳಿತೇ 500 ರೂ. ಮುಖಬೆಲೆಯ ನಕಲಿ ನೋಟು ಪ್ರಿಂಟ್ ಮಾಡಿದ್ದಾನೆ.

ಈತ ಮನೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿಕೊಂಡಿದ್ದ. ಆ ಬಳಿಕ ಮನೆಯಿಂದ ಬೇಕಾದಷ್ಟು ಹಣ ದೊರಕದಿದ್ದಾಗ ತನ್ನ ಬಳಿಯಿರುವ ಹಣ ಸಾಕಾಗುವುದಿಲ್ಲ ಎಂದು ಯೋಚಿಸಿ ತಾನೇ ಖೋಟ ನೋಟ್ ಪ್ರಿಂಟ್ ಮಾಡುವ ಪ್ಲಾನ್ ಹಾಕಿಕೊಂಡಿದ್ದಾನೆ. ಹೀಗಾಗಿ ಆನ್‌ಲೈನ್‌ ಮೂಲಕ ರೂಮ್ ಬುಕ್ ಮಾಡಿದ್ದ. ಜೂನ್ 1ರಂದು ರೂಮ್ ಬುಕ್ ಮಾಡಿಕೊಂಡಿದ್ದಾನೆ. ಜೂನ್ 7ರಂದು ಹೋಟೆಲ್‌ನಿಂದ ಚೆಕ್ ಔಟ್ ಆಗುವಾಗ ನಕಲಿ ನೋಟುಗಳ ಮೂಲಕ ಬಿಲ್ ಪಾವತಿ ಮಾಡಿದ್ದಾನೆ.

ಬಳಿಕ ರೂಮ್​ ಬಾಯ್​ ಕ್ಲೀನ್ ಮಾಡಲು ಬಂದಾಗ ಈ ವಿಚಾರ ಬೆಳಕಿಗೆ ಬಂದಿದೆ. ರೂಂ ಕ್ಲೀನ್ ಮಾಡುವಾಗ ಆತನ ರೂಂ ಡೆಸ್ಟ್ ಬಿನ್‌ನಲ್ಲಿ ಕೆಲ ನಕಲಿ ನೋಟುಗಳು ಪತ್ತೆಯಾಗಿದೆ. ತಕ್ಷಣ ರೂಮ್ ಬಾಯ್​, ಹೋಟೆಲ್ ಮ್ಯಾನೇಜರ್‌ಗೆ ಈ ವಿಚಾರ ತಿಳಿಸಿದ್ದಾನೆ. ಬಳಿಕ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ, ಕ್ರಿಷ್ ಮಾಲಿ ನೀಡಿದ್ದ ಹಣವನ್ನು ಪರಿಶೀಲನೆ ಮಾಡಿದಾಗ ಅದು ನಕಲಿ ನೋಟು ಎನ್ನುವುದು ಗೊತ್ತಾಗಿದೆ.


ಅವು ನಕಲಿ ಎಂದು ತಿಳಿದು ಆತ ತಂಗಿದ್ದ ರೂಮ್‌ನಲ್ಲಿ ಪರಿಶೀಲನೆ ಮಾಡಿದಾಗ ಬಿಳಿ ಹಾಳೆಗಳ ಬಂಡಲ್, ನಕಲಿ ನೋಟಿನ ಚೂರುಗಳು ಪತ್ತೆಯಾಗಿವೆ. ಬಳಿಕ ಹೋಟೆಲ್ ಮ್ಯಾನೇಜರ್ ಮೊಹಮ್ಮದ್ ಷರೀಫ್ ಉದ್ದೀನ್, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ರೂಮ್ ಬಾಡಿಗೆಗೆ ಪಡೆದುಕೊಳ್ಳುವಾಗ ಆರೋಪಿ ನೀಡಿದ್ದ ಆಧಾರ್‌ನಲ್ಲಿದ್ದ ವಿಳಾಸ ಆಧರಿಸಿ ಕ್ರಿಷ್ ಮಾಲಿನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


Ads on article

Advertise in articles 1

advertising articles 2

Advertise under the article