ವರದಕ್ಷಿಣೆಯಾಗಿ ಸೊಸೆಯ ಕಿಡ್ನಿಯನ್ನೇ ಕೇಳಿದ ಮಾವ


ಪಾಟ್ನಾ: ವರದಕ್ಷಿಣೆಯಾಗಿ ಕಾರು, ಮನೆ, ಚಿನ್ನ, ಆಸ್ತಿಯನ್ನೆಲ್ಲ ಕೇಳುವುದು ಮಾಮೂಲಿ. ಸದ್ಯ ವರದಕ್ಷಿಣೆ ತೆಗೆದುಕೊಳ್ಳುವುದು ಕಾನೂನು ಪ್ರಕಾರ ಅಪರಾಧವೆಂದಿದ್ದರೂ ಕೆಲವು ಕಡೆ ಗುಟ್ಟಾಗಿ ಈ ವ್ಯವಹಾರಗಳೆಲ್ಲ ನಡೆಯುತ್ತವೆ. ವರದಕ್ಷಿಣೆ ವಿಚಾರದಲ್ಲಿ, ಬಿಹಾರದಲ್ಲೊಂದು ವಿಚಿತ್ರ ಘಟನೆ ನಡೆದುದೆ. ವರದಕ್ಷಿಣೆಯಾಗಿ ಬೈಕ್, ನಗದು ಮತ್ತು ಆಭರಣಗಳನ್ನು ತರಲು ಸಾಧ್ಯವಾಗದಿದ್ದರೆ ನಿನ್ನ ಪತಿಗೆ ನಿನ್ನ ಕಿಡ್ನಿಯನ್ನೇ ವರದಕ್ಷಿಣೆಯಾಗಿ ನೀಡು ಎಂದು ಮಾವ ಪೀಡಿಸಿದ್ದಾನೆಂದು ಪ್ರಕರಣ ದಾಖಲಾಗಿದೆ.

ಈ ವಿಚಿತ್ರ ಘಟನೆ ಉತ್ತರ ಬಿಹಾರದ ಮುಜಫರ್‌ಪುರದಲ್ಲಿ ನಡೆದಿದೆ. ಈ ಕುರಿತು ಮುಜಫರ್‌ಪುರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೀಪ್ತಿ ಎಂಬ ಮಹಿಳೆ ದೂರು ದಾಖಲಿಸಿದ್ದಾರೆ.

ಪೊಲೀಸರಿಗೆ ತನಗೆ ನಡೆದ ದೌರ್ಜನ್ಯವನ್ನು ವಿವರಿಸುತ್ತಾ, ನಾನು 2021ರಲ್ಲಿ ವಿವಾಹವಾಗಿದ್ದೇನೆ. ನನ್ನ ಪತಿಯ ಮನೆ ಮುಜಫರ್‌ಪುರದ ಬೋಚಾಹಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದೆ. ಮದುವೆಯ ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಆ ಬಳಿಕ ಅತ್ತೆ-ಮಾವ ಮಾನಸಿಕವಾಗಿ ಕಿರುಕುಳ ನೀಡಲು ಪ್ರಾರಂಭಿಸಿದರು ಮತ್ತು ದೈಹಿಕವಾಗಿ ಹಲ್ಲೆ ನಡೆಸಿದರು. ನನ್ನ ಪೋಷಕರ ಮನೆಯಿಂದ ಬೈಕ್ ಮತ್ತು ಹಣವನ್ನು ತರುವಂತೆ ಕೇಳಿದರು ಎಂದಿದ್ದಾರೆ.

ಅತ್ತೆ-ಮಾವನ ಬೇಡಿಕೆಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗದಿದ್ದಾಗ, ನನ್ನ ಅನಾರೋಗ್ಯ ಪೀಡಿತ ಪತಿಗೆ ನನ್ನ ಮೂತ್ರಪಿಂಡಗಳಲ್ಲಿ ಒಂದನ್ನು ದಾನ ಮಾಡುವಂತೆ ಒತ್ತಾಯಿಸಲು ಪ್ರಾರಂಭಿಸಿದರು. “ನನ್ನ ಮದುವೆಯಾದ ಎರಡು ವರ್ಷಗಳ ಬಳಿಕ ನನ್ನ ಪತೊಗಿರುವ ಕಿಡ್ನಿ ಕಾಯಿಲೆಯ ಬಗ್ಗೆ ನನಗೆ ತಿಳಿಯಿತು. ಕಿಡ್ನಿ ಕೊಡಬೇಕೆಂದು ನನಗೆ ಒತ್ತಡ ಹೇರಿದರು, ಹೊಡೆದರು, ಪೀಡಿಸಿದರು” ಎಂದು ಅವರು ದೂರಿದ್ದಾರೆ.

“ಬಳಿಕ ನಾನು ನನ್ನ ಪೋಷಕರ ಮನೆಗೆ ಹೋಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ” ಎಂದು ಅವರು ಹೇಳಿದ್ದಾರೆ. ಪೊಲೀಸರು ಎರಡೂ ಕಡೆಯವರ ನಡುವೆ ಶಾಂತಿ ಸ್ಥಾಪಿಸಲು ಪ್ರಯತ್ನಿಸಿದರು. ಆದರೆ ಅದು ಯಶಸ್ವಿಯಾಗಲಿಲ್ಲ. ದೀಪ್ತಿಗೆ ಪತಿಯಿಂದ ವಿಚ್ಛೇದನ ಪಡೆಯುವಂತೆ ಪೊಲೀಸರು ಸಲಹೆ ನೀಡಿದರು. ಆದರೆ ಅವರು ಅದಕ್ಕೆ ಒಪ್ಪಲಿಲ್ಲ. ಬಳಿಕ, ಮಹಿಳಾ ಪೊಲೀಸ್ ಠಾಣೆಯಲ್ಲಿ 38/25 ಪ್ರಕರಣ ದಾಖಲಾಗಿದ್ದು, ಆಕೆಯ ಪತಿ ಸೇರಿದಂತೆ ಆಕೆಯ ಅತ್ತೆ-ಮಾವನ ಕುಟುಂಬದ ನಾಲ್ವರು ಸದಸ್ಯರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ.

BREAKING NEWS
Loading latest news...
Join our WhatsApp Channel Powered By : Online Pudu