-->
1990ರ ದಶಕದಲ್ಲಿ 1ಲಕ್ಷ ರೂ ಮೊತ್ತದ ಷೇರು ಖರೀದಿಸಿ ಮರೆತುಬಿಟ್ಟ ತಂದೆ, 3ದಶಕಗಳ ಬಳಿಕ ಪುತ್ರನಿಗೆ ಸಿಕ್ಕ ಷೇರು ಪ್ರಮಾಣ ಪತ್ರ- ಈಗಿನ ಮೌಲ್ಯ ಎಷ್ಟು ಕೋಟಿ ಗೊತ್ತಾ?

1990ರ ದಶಕದಲ್ಲಿ 1ಲಕ್ಷ ರೂ ಮೊತ್ತದ ಷೇರು ಖರೀದಿಸಿ ಮರೆತುಬಿಟ್ಟ ತಂದೆ, 3ದಶಕಗಳ ಬಳಿಕ ಪುತ್ರನಿಗೆ ಸಿಕ್ಕ ಷೇರು ಪ್ರಮಾಣ ಪತ್ರ- ಈಗಿನ ಮೌಲ್ಯ ಎಷ್ಟು ಕೋಟಿ ಗೊತ್ತಾ?


ಷೇರು ಮಾರುಕಟ್ಟೆ ವ್ಯವಹಾರದ ಮಾತು ಹೀಗಿದೆ, 'ಸರಿಯಾದ ಷೇರು ಖರೀದಿ ಮತ್ತು ಮರೆತುಬಿಡಿ'. ಅದಕ್ಕೆ ಪಕ್ಕಾ ಉದಾಹರಣೆಯೊಂದು ಇದೀಗ ದೊರಕಿದೆ. 1990ರ ದಶಕದಲ್ಲಿ ತಂದೆಯೋರ್ವರು ಕೇವಲ 1 ಲಕ್ಷ ಹೂಡಿಕೆ ಮಾಡಿ ಜೆಎಸ್‌ಡಬ್ಲ್ಯು ಸ್ಟೀಲ್ (ಆಗ ಜಿಂದಾಲ್‌ ವಿಜಯನಗರ ಸ್ಟೀಲ್‌ ಪ್ರೈ. ಲಿ.) ಷೇರುಗಳನ್ನು ಖರೀದಿಸಿದ್ದರು. ಬಳಿಕ ಅದನ್ನು ಮರೆತು ಬಿಟ್ಟಿದ್ದರು. ಎಷ್ಟು ಮರೆತುಬಿಟ್ಟಿದ್ದರೆಂದರೆ, ಅವರಿಗೂ ನೆನಪಿರಲಿಲ್ಲ; ತಮ್ಮ ಪುತ್ರನಿಗೂ ಹೇಳಿರಲಿಲ್ಲ.

ಇದೀಗ ಆ ಷೇರು ಖರೀದಿ ಪ್ರಮಾಣಪತ್ರಗಳು ಪುತ್ರನ ಕೈಗೆ ಸಿಕ್ಕಿದೆ. ಅದೂ ಮೂವತ್ತು ವರ್ಷಗಳ ಬಳಿಕ. ಇದೀಗ ಮಗನಿಗೆ ನಿಧಿ ಸಿಕ್ಕಿದಂತಾಗಿದೆ. ಏಕಾಏಕಿ ಆತ ಕೋಟ್ಯಧಿಪತಿಯಾಗಿದ್ದಾನೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಮಯವೇ ಎಲ್ಲಕ್ಕಿಂತ ಶಕ್ತಿಶಾಲಿ ಹೂಡಿಕೆ ಎಂದು ಮತ್ತೊಮ್ಮೆ ಸಾಬೀತಾಗಿದೆ.

ಸೌರವ್ ದತ್ತಾ ಎಂಬವರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಜೊತೆಗೆ ಮೂಲ ಪ್ರಮಾಣಪತ್ರಗಳ ಚಿತ್ರಗಳನ್ನೂ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. "ರೆಡ್ಡಿಟ್‌ನಲ್ಲಿರುವ ವ್ಯಕ್ತಿಯೊಬ್ಬರು 1990ರ ದಶಕದಲ್ಲಿ ಅವರ ತಂದೆ 1 ಲಕ್ಷ ರೂ.ಗಳಿಗೆ ಖರೀದಿಸಿದ ಜೆಎಸ್‌ಡಬ್ಲ್ಯು ಷೇರುಗಳನ್ನು ಕಂಡುಹಿಡಿದಿದ್ದಾರೆ," ಎಂದು ಬರೆದುಕೊಂಡಿದ್ದಾರೆ.

ಸೌರವ್‌ ದತ್ತಾ ಅವರು ಈ ಷೇರುಗಳ ಪ್ರಸ್ತುತ ಮೌಲ್ಯವನ್ನು ಲೆಕ್ಕ ಹಾಕಿದ್ದಾರೆ. ಹಾಗೆ ಲೆಕ್ಕ ಹಾಕಿದಾಗ ಬಂದ ಮೊತ್ತ ಬರೋಬ್ಬರಿ 80 ಕೋಟಿ ರೂಪಾಯಿ. ಇದನ್ನು ನೋಡಿ ಅವರು, 'ಖರೀದಿಸಿ 30 ವರ್ಷಗಳ ನಂತರ ಮಾರಾಟ ಮಾಡಿ' ಎಂದು ಘೋಷಿಸಿದ್ದಾರೆ.

ಜೆಎಸ್‌ಡಬ್ಲ್ಯು ಸ್ಟೀಲ್ ಲಿ. ಷೇರು ಪ್ರಸ್ತುತ 1,006.45 ರೂ.ನಲ್ಲಿ ವಹಿವಾಟು ನಡೆಸುತ್ತಿದೆ. ಸೋಮವಾರ ಕೂಡ ಷೇರು 1.55 ರೂ. ಅಥವಾ ಶೇ. 0.15ರಷ್ಟು ಏರಿಕೆ ಕಂಡಿದೆ.


ಇದಕ್ಕೆ ಹಲವರು ಪ್ರತಿಕ್ರಿಯೆಗಳನ್ನು ಕೂಡ ನೀಡಿದ್ದಾರೆ. 80 ಕೋಟಿ ರೂ.ಗಳಿಗೆ ಎಷ್ಟು ತೆರಿಗೆ ವಿಧಿಸಲಾಗುತ್ತದೆ? ಎಂದು ಒಬ್ಬರು ಪ್ರಶ್ನಿಸಿದ್ದು ಬಹುಶಃ ಶೇ. 30ರಷ್ಟು ಇರಬಹುದು ಎಂದು ಹೇಳಿದ್ದಾರೆ. ಶೇ. 30ರಷ್ಟು ತೆರಿಗೆ ಎಂದರೆ 24 ಕೋಟಿ ರೂ. ಆಗುತ್ತದೆ.

ಇನ್ನೋರ್ವ ಹಿರಿಯ ಹೂಡಿಕೆದಾರರು ಜಿಂದಾಲ್‌ ಐಪಿಒವನ್ನು ನೆನಪಿಸಿಕೊಂಡಿದ್ದು, ನನಗೆ ಜಿಂದಾಲ್ ವಿಜಯನಗರ ಸ್ಟೀಲ್ ಐಪಿಒ ನೆನಪಿದೆ. 1990ರ ದಶಕದ ಅಂತ್ಯದಲ್ಲಿ ನಡೆದಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನೊಬ್ಬರು, ಈ ಷೇರಿನಿಂದ ಅವರೇನೂ ಶ್ರೀಮಂತರಾಗಿಲ್ಲ. 1990ರಲ್ಲಿ 1 ಲಕ್ಷ ರೂ. ಒಂದೇ ಷೇರಿನಲ್ಲಿ ಹೂಡಿಕೆ ಮಾಡುವಷ್ಟು ಶ್ರೀಮಂತರಾಗಿದ್ದರೆ, ನಿಜವಾಗಿಯೂ ಅವರು ಆಗರ್ಭ ಸಿರಿವಂತರೇ ಆಗಿದ್ದರು. 1993ರ ಹೊತ್ತಿಗೆ ನನ್ನ ತಂದೆ ಮಾಸಿಕ ಸಂಬಳ ಕೇವಲ 800 ರೂ. ಇತ್ತು. ಆ ಸಂಬಳದಲ್ಲೇ ನಾವು ಸಾಕಷ್ಟು ಶ್ರೀಮಂತರಾಗಿದ್ದೆವು ಎಂದು ಈ ಹೂಡಿಕೆ ಜೊತೆ ಹೋಲಿಕೆ ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article