ಮಂಗಳೂರು: ಪಿಕ್ಅಪ್ ವಾಹನವೊಂದು ಕಾರಿಗೆ ಢಿಕ್ಕಿಯಾದ ರಭಸಕ್ಕೆ ಕಾರು ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದ ಮೂವರು ಪಾದಚಾರಿಗಳಿಗೆ ಡಿಕ್ಕಿಯಾದ ಪರಿಣಾಮ ಸಿಂಧನೂರು ಶಾಸಕರ ಸೋದರಳಿಯ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಂಗಳೂರಿನ ಕುಳಾಯಿಯಲ್ಲಿ ಶನಿವಾರ ಮಧ್ಯಾಹ್ನ 2.45ರ ಸುಮಾರಿಗೆ ನಡೆದಿದೆ. ಅಪಘಾತದ ಭೀಕರ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಅಪಘಾತದಲ್ಲಿ ಸಿಂಧನೂರು ಶಾಸಕ ಹಂಪನ ಗೌಡ ಬಾದರ್ಲಿಯವ ಸಹೋದರಿಯ ಪುತ್ರ ದೀಪು ಗೌಡ(40) ಮೃತಪಟ್ಟಿದ್ದಾರೆ. ಕೊಪ್ಪಳ ಕರಟಗಿ ಮೂಲದ ಪ್ರದೀಪ್ ಕೊಲ್ಕಾರ್(35), ಮಂಗಳೂರು ಹೊರವಲಯದ ಕೋಡಿಕೆರೆ ನಿವಾಸಿ ನಾಗರಾಜ್ ಉಮೇಶ್ ಅಮೀನ್(42) ಗಾಯಗೊಂಡಿದ್ದಾರೆ. ಇವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅತೀವೇಗವಾಗಿ ಬಂದ ಪಿಕ್ಅಪ್ ಮುಂಭಾಗದಲ್ಲಿ ಸಂಚರಿಸುತ್ತಿದ್ದ ಕಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮೂವರಿಗೆ ಡಿಕ್ಕಿಯಾಗಿದೆ. ಪರಿಣಾಮ ಇಬ್ಬರು ರಸ್ತೆಗೆಸೆಯಲ್ಪಟ್ಟರೆ, ಕಾರು ದೀಪು ಗೌಡರನ್ನು ತಳ್ಳಿಕೊಂಡು ಹೋಗಿ ರಸ್ತೆ ಬದಿ ನಿಂತಿದ್ದ ಲಾರಿಗೆ ಗುದ್ದಿದೆ. ಪರಿಣಾಮ ಕಾರು - ಲಾರಿ ನಡುವೆ ಸಿಲುಕಿದ್ದ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.