ನಾಲ್ಕು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವಿವಾಹಿತೆ ಮೃತದೇಹವಾಗಿ ಪತ್ತೆ : ಜಿಮ್ ತರಬೇತುದಾರ ಅರೆಸ್ಟ್


ಕಾನ್ಪುರ: ಕಳೆದ 4ತಿಂಗಳ ಹಿಂದೆ ನಾಪತ್ತೆಯಾಗಿದ್ದ 32 ವರ್ಷದ ಯುವತಿಯ ಮೃತದೇಹವನ್ನು ಉತ್ತರ ಪ್ರದೇಶದ ಕಾನ್ಪುರದಲ್ಲಿ ಪತ್ತೆ ಹಚ್ಚಲಾಗಿದೆ. ಈ ಯುವತಿಯನ್ನು ಆಕೆಯ ಜಿಮ್ ತರಬೇತುದಾರ ಹತ್ಯೆಗೈದಿದ್ದಾನೆ ಎಂದು ಆರೋಪಿಸಲಾಗಿದೆ.

ಏಕ್ತಾ ಗುಪ್ತಾ ಜಿಮ್ ತರಬೇತುದಾರ ವಿಶಾಲ್ ಸೋನಿ ನೀಡಿರುವ ಮಾಹಿತಿಯನ್ವಯ ಆಕೆಯ ಮೃತದೇಹವನ್ನು ಕಾನ್ಪುರ ಜಿಲ್ಲಾಧಿಕಾರಿ ನಿವಾಸದ ಬಳಿ ಇರುವ ಕ್ಲಬ್ ಒಂದರಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಮೃತಪಟ್ಟ ಏಕ್ತಾ ಗುಪ್ತಾರ ಪತಿ ರಾಹುಲ್ ಗುಪ್ತ ದಾಖಲಿಸಿದ್ದ ದೂರನ್ನು ಆಧರಿಸಿ, ಈ ಪ್ರಕರಣದ ಸಂಬಂಧ ವಿಶಾಲ್ ಸೋನಿಯನ್ನು ಪೊಲೀಸರು ಬಂಧಿಸಿದ್ದರು.

ವಿಚಾರಣೆಯ ಸಂದರ್ಭದಲ್ಲಿ ಆತ ತನಗೂ ಏಕ್ತಾ ಗುಪ್ತಗೂ ಸಂಬಂಧವಿತ್ತು. ನಾನು ಮತ್ತೊಬ್ಬ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವುದಕ್ಕೆ ಆಕೆ ಆಕ್ಷೇಪಿಸಿದ್ದಳು ಎಂದು ವಿಶಾಲ್ ಸೋನಿ ಬಹಿರಂಗಗೊಳಿಸಿದ್ದ ಎನ್ನಲಾಗಿದೆ.

ಜೂನ್ 24ರಂದು ಜಿಮ್‌ಗೆ ಹೋಗಿದ್ದ ಏಕ್ತಾ ಗುಪ್ತ, ಈ ವಿಚಾರದ ಬಗ್ಗೆ ವಿಶಾಲ್ ಸೋನಿಯೊಂದಿಗೆ ವಾಗ್ವಾದ ನಡೆಸಿದ್ದರು. ಆಗ ವಿಶಾಲ್ ಸೋನಿ ಗುದ್ದಿದ್ದಾನೆ. ಇದರಿಂದ ಆಕೆ ಮೂರ್ಛೆ ಹೋಗಿದ್ದಾಳೆ. ಬಳಿಕ ವಿಶಾಲ್ ಸೋನಿ ಆಕೆಯನ್ನು ಹತ್ಯೆಗೈದು ಕಾಲ್ಪುರ ಜಿಲ್ಲಾಧಿಕಾರಿ ನಿವಾಸದ ಬಳಿ ಇರುವ ಕ್ಲಬ್ ಒಂದರಲ್ಲಿ ಹೂತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಆದರೆ, ತಮ್ಮ ಪತ್ನಿ ವಿಶಾಲ್ ಸೋನಿಯೊಂದಿಗೆ ಸಂಬಂಧ ಹೊಂದಿದ್ದರು ಎಂಬ ಆರೋಪವನ್ನು ಆಕೆಯ ಪತಿ ರಾಹುಲ್ ಗುಪ್ತ ಅಲ್ಲಗಳೆದಿದ್ದಾರೆ. "ಇಬ್ಬರ ನಡುವೆ ಯಾವುದೇ ಪ್ರಣಯ ಸಂಬಂಧವಿರಲಿಲ್ಲ. ಇದು ಅಪಹರಣದ ಪ್ರಕರಣವಾಗಿದ್ದು, ನಾವು ಅಪಹರಣದ ದೂರು ದಾಖಲಿಸಿದ್ದೆವು" ಎಂದು ಹೇಳಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu