ಮಂಗಳೂರು: ಕುತ್ತಾರು ಕೊರಗಜ್ಜನ ಕೋಲದಲ್ಲಿ ನಟಿ ಕತ್ರಿನಾ ಕೈಫ್, ಕ್ರಿಕೆಟಿಗ ಕೆ.ಎಲ್.ರಾಹುಲ್ ಭಾಗಿ
Monday, July 15, 2024
ಮಂಗಳೂರು: ನಗರದ ಹೊರವಲಯದ ಕಾರಣಿಕ ಕ್ಷೇತ್ರ ಕುತ್ತಾರು ಕೊರಗಜ್ಜನ ಕ್ಷೇತ್ರದಲ್ಲಿ ರವಿವಾರ ರಾತ್ರಿ ನಡೆದ ಹರಕೆಯ ಕೋಲದಲ್ಲಿ ಬಾಲಿವುಡ್ ನಟಿ ಕತ್ರಿನಾ ಕೈಫ್, ಹಾಗೂ ಕ್ರಿಕೆಟಿಗ ಕೆ.ಎಲ್.ರಾಹುಲ್ ಸೇರಿದಂತೆ ಬಾಲಿವುಡ್ ನಟ-ನಟಿಯರ ತಂಡ ಭಾಗವಹಿಸಿ ದೈವದ ಕೃಪೆಗೆ ಪಾತ್ರರಾದರು.
ಬಾಲಿವುಡ್ ನಟಿ ಕತ್ರಿನಾ ಕೈಫ್, ಅವರ ಪತಿ ನಟ ವಿಕ್ಕಿ ಕೌಶಲ್, ಕ್ರಿಕೆಟಿಗ ಕೆ.ಎಲ್ .ರಾಹುಲ್, ಅವರ ಪತ್ನಿ ನಟಿ ಆಥಿಯಾ ಶೆಟ್ಟಿ, ನಟ ಅಹನ್ ಶೆಟ್ಟಿ ಸೇರಿದಂತೆ ಮ್ಯಾಟ್ರಿಕ್ಸ್ ಎಂಟರ್ಟೈನ್ಮೆಂಟ್ನ ರೇಷ್ಮಾ ಶೆಟ್ಟಿ ಹಾಗೂ ವಿ.ಎಂ.ಕಾಮತ್ ಸೇರಿದಂತೆ ಒಟ್ಟು 9 ಮಂದಿಯ ಹೆಸರು ಎರಡು ತಿಂಗಳ ಹಿಂದೆಯೇ ಕುತ್ತಾರು ಕ್ಷೇತ್ರದ ಹರಕೆಯ ಕೋಲ ಸಲ್ಲಿಸುವ ಭಕ್ತರು ಎಂದು ಬರೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ರವಿವಾರ ಹರಕೆಯ ಕೋಲ ನಡೆದಿದ್ದು, ವಿಕ್ಕಿ ಕೌಶಲ್ ಹೊರತುಪಡಿಸಿ ಉಳಿದೆಲ್ಲರೂ ಭಾಗಿಯಾಗಿದ್ದರು.
ಕ್ಷೇತ್ರದ ಸಂಪ್ರದಾಯದಂತೆ ಸಂಜೆ 7ಗಂಟೆಯ ಬಳಿಕ ಮಹಿಳೆಯರು ಕೊರಗಜ್ಜನ ಕಟ್ಟೆಯ ಆವರಣದಲ್ಲಿ ಇರುವಂತಿಲ್ಲ. ಆದ್ದರಿಂದ ಕತ್ರಿನಾ ಕೈಫ್, ರೇಷ್ಮಾ ಶೆಟ್ಟಿ, ಆಥಿಯಾ ಶೆಟ್ಟಿ ಕೋಲ ನಡೆಯುವ ಸಂದರ್ಭ ಹೊರಗುಳಿದು ಕಚೇರಿಯಲ್ಲಿ ಕುಳಿತಿದ್ದರು. ಕ್ರಿಕೆಟಿಗ ಕೆ.ಎಲ್.ರಾಹುಲ್ ಮತ್ತು ಅಹಾನ್ ಶೆಟ್ಟಿ ಮಾತ್ರ ಕೋಲದಲ್ಲಿ ಭಾಗಿಯಾಗಿದ್ದರು. ವಿಶೇಷವೆಂದರೆ ಬೆಳಕಿಲ್ಲದೆ ಕತ್ತಲೆಯಲ್ಲಿ ನಡೆಯುವ ಈ ಕೋಲವನ್ನು ಮಹಿಳೆಯರು ಹೊರಗಡೆಯೇ ನಿಂತು ಧನ್ಯತಾ ಭಾವ ಅನುಭವಿಸಿದರು.
ಸಂಜೆ 6ಗಂಟೆ ವೇಳೆಗೆ ಬಾಲಿವುಡ್ ನಟ, ನಟಿಯರು, ಕ್ರಿಕೆಟಿಗ ಕೆ.ಎಲ್.ರಾಹುಲ್ ಕುತ್ತಾರಿಗೆ ಆಗಮಿಸಿದ್ದರು. ಕೊರಗಜ್ಜನ ಕಟ್ಟೆಯೊಳಗೆ ಫೋಟೊ, ವೀಡಿಯೋ ನಿಷೇಧವಿದ್ದು, ಸ್ಥಳದಲ್ಲಿ ಫೋಟೊ ತೆಗೆಯದಂತೆ ವಿನಂತಿ ಮಾಡಲಾಗಿತ್ತು. ಫೋಟೊ, ವೀಡಿಯೋ ತೆಗೆದವರನ್ನು ಡಿಲಿಟ್ ಮಾಡುವಂತೆ ಕೋರಲಾಗಿತ್ತು.